ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸಾಕೇತ್ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಪ್ರತಿಭಟನಾನಿರತ ವಕೀಲರು ಭದ್ರತಾ ಕೆಲಸದಲ್ಲಿದ್ದ ಓರ್ವ ಪೊಲೀಸ್ ಪೇದೆಯನ್ನು ಥಳಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಪೊಲಿಸರು ಇಂದು ಪೊಲೀಸ್ ಪ್ರಧಾನ ಕಚೇರಿಯ ಎದುರು ನ್ಯಾಯಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಶನಿವಾರ ಮಧ್ಯಾಹ್ನ ನ್ಯಾಯಾಲಯದ ಆವರಣದಲ್ಲಿ ಪಾರ್ಕಿಂಗ್ ವಿಚಾರವಾಗಿ ಪೊಲೀಸ್ ಮತ್ತು ವಕೀಲರ ನಡುವೆ ಉಂಟಾಗಿದ್ದ ಘರ್ಷಣೆಯಲ್ಲಿ ಪೊಲೀಸರ ಗುಂಡೇಟಿಗೆ ಓರ್ವ ವಕೀಲ ತೀವ್ರ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಸೋಮವಾರ ಪೊಲೀಸರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ವಕೀಲರು ಈ ವೇಳೆ ರಕ್ಷಣಾ ಕೆಲಸದಲ್ಲಿ ನಿರತನಾಗಿದ್ದ ಓರ್ವ ಪೊಲೀಸ್ ಪೇದೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿ ದೆಹಲಿಯ ಎಲ್ಲಾ ಪೊಲೀಸರು ಇಂದು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ.
ಪೊಲೀಸ್ ಸಮವಸ್ತ್ರವನ್ನು ಕಳಚಿಟ್ಟು ನಾಗರೀಕ ಉಡುಪಿನಲ್ಲಿ ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಜಮಾಯಿಸಿರುವ ಪೊಲೀಸರು “ನಾವು ಸಹ ಮಾನವರು” “ನಮಗೂ ರಕ್ಷಣೆ ನೀಡಿ” “ಸೇವ್ ಪೊಲೀಸ್” ಎಂದು ಘೋಷಣೆ ಕೂಗುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು. ಅಲ್ಲದೆ, ಪೊಲೀಸ್ ಆಯುಕ್ತರಿಗೆ ತಮ್ಮ ಬೇಡಿಕೆಗಳ ಮನವಿ ಪತ್ರ ನೀಡದೆ ತಾವು ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
“ಇದು ಶಾಂತಿಯುತ ಪ್ರತಿಭಟನೆಯಾಗಿದ್ದು, ಆಯುಕ್ತರು ನಮ್ಮನ್ನು ಬೇಟಿ ಮಾಡಿ ನಮ್ಮ ಕುಂದು ಕೊರತೆಗಳ ಮನವಿಯನ್ನು ಸ್ವೀಕರಿಸಿದರೇ ಪ್ರತಿಭಟನೆಯನ್ನು ಕೈಬಿಟ್ಟು ಇಲ್ಲಿನ ಪರಿಸ್ಥಿತಿಯನ್ನು ನಾವೇ ತಿಳಿಗೊಳಿಸುತ್ತೇವೆ” ಎಂದು ಪ್ರತಿಭಟನಾ ನಿರತರು ಸಿಎನ್ಎನ್ ನ್ಯೂಸ್18 ಗೆ ತಿಳಿಸಿದ್ದಾರೆ.
“ನಾವು ಪ್ರತಿದಿನ ಯಾವ ರೀತಿಯ ಅಪಾಯಗಳನ್ನು ಎದುರಿಸುತ್ತೇವೆ ಎಂಬ ಅರಿವು ಸಾಮಾನ್ಯ ಜನರಿಗೆ ಇಲ್ಲ. ನಮ್ಮನ್ನೇ ನಾವು ಉಳಿಸಿಕೊಳ್ಳದೇ ಇದ್ದರೆ ಬೇರೆಯವರನ್ನು ಉಳಿಸುವ ಜವಾಬ್ದಾರಿಯನ್ನು ನಾವು ಹೇಗೆ ನಿಭಾಯಿಸುವುದು? ನಾವು ಸಹ ಮನುಷ್ಯರು ನಮ್ಮನ್ನೂ ಗೌರವದಿಂದ ಕಾಣಬೇಕು” ಎಂದು ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸ್ ಪೇದೆ ತನ್ನ ನೋವನ್ನು ತೋಡಿಕೊಂಡಿದ್ದಾರೆ.
ಮತ್ತೋರ್ವ ಪೊಲೀಸ್ ಪೇದೆ ಮಾತನಾಡಿ, “ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ಪ್ರತಿದಿನ ಇಂತಹ ಒಂದಲ್ಲಾ ಒಂದು ಸವಾಲನ್ನು ಎದುರಿಸುವಂತಾಗಿದೆ.
ಪೊಲೀಸರಿಗೂ ಆತ್ಮಗೌರವ ಎಂಬುದು ಇರುತ್ತದೆ. ಕೇಂದ್ರದ ನರೇಂದ್ರ ಮೋದಿ ಹಾಗೂ ದೆಹಲಿಯ ಕೇಜ್ರಿವಾಲ್ ಸರ್ಕಾರ ದೆಹಲಿ ಪೊಲೀಸರ ರಕ್ಷಣೆಗೆ ಇನ್ನಾದರೂ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಇಂತಹ ಪ್ರತಿಭಟನೆಗಳು ಮುಂದುವರೆಯುತ್ತಲೇ ಇರುತ್ತದೆ” ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಒಟ್ಟಾರೆ ರಾಷ್ಟ್ರದಲ್ಲೇ ಮೊದಲ ಬಾರಿಗೆ ಪೊಲೀಸರು ರಸ್ತೆಗಿಳಿದು ತಮ್ಮ ರಕ್ಷಣೆಗಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಅಪರೂಪದ ಘಟನೆಗೆ ಇಂದು ದೆಹಲಿ ಸಾಕ್ಷಿಯಾಗಿದೆ. ನಗರದ ಎಲ್ಲಾ ಪೊಲೀಸರು ಪ್ರತಿಭಟನೆಗಾಗಿ ಪೊಲೀಸ್ ಪ್ರಧಾನ ಕಚೇರಿಯ ಎದುರು ಜಮಾಯಿಸಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.