ಬೆಂಗಳೂರು,ನ.೫- ನಗರದ ಮಿಂಟೋ ಆಸ್ಪತ್ರೆ ವೈದ್ಯರ ಜೊತೆ ಕರವೇ ಕಾರ್ಯಕರ್ತರು ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಇಂದು ನೂರಾರು ಕಿರಿಯ ವೈದ್ಯರು ವಿಕ್ಟೋರಿಯ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಲಾಗಿತ್ತು. ಪ್ರತಿಭಟನೆಯಲ್ಲಿ ಬೌರಿಂಗ್ ಆಸ್ಪತ್ರೆ, ವಾಣಿವಿಲಾಸ, ವಿಕ್ಟೋರಿಯಾ ಆಸ್ಪತ್ರೆಯ ಕಿರಿಯ ವೈದ್ಯರು ಪಾಲ್ಗೊಂಡಿದ್ದರು. ಈ ಪ್ರತಿಭಟನೆಗೆ ಹಿರಿಯ ವೈದ್ಯರು ನೈತಿಕ ಬೆಂಬಲ ನೀಡಿದ್ದಾರೆ.
ಮಿಂಟೋ ಆಸ್ಪತ್ರೆಯ್ಲಲಿ ಕಣ್ಣಿನ ಶಸ ಚಿಕಿತ್ಸೆಗೊಳಗಾದವರ ಪೈಕಿ ಕೆಲವರಿಗೆ ದೃಷ್ಟಿ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕರವೇ ಕಾರ್ಯಕರ್ತರು ಕಳೆದ ವಾರ ಮಿಂಟೋ ಆಸ್ಪತ್ರೆ ಮುಂದೆ ಜಮಾಯಿಸಿ ಕಿರಿಯ ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಕಾರ್ಯಕರ್ತರ ವರ್ತನೆಯಿಂದ ನೊಂದ ಹಿರಿಯ ವೈದ್ಯರು ಅಂದೇ ಅಹೋರಾತ್ರಿ ಧರಣಿ ನಡೆಸಿದ್ದರು. ರೋಗಿಗಳ ಜೀವ ಉಳಿಸಲು ಹಗಲಿರುಳು ಕರ್ತವ್ಯ ನಿರ್ವಹಿಸುವ ನಮ್ಮ ಜೀವಕ್ಕೆ ಬೆಲೆಯಿಲ್ಲವೇ, ನಮಗೆ ಜೀವ ಬೆದರಿಕೆಯಿದೆ, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಪ್ರತಿಭಟನಾನಿರತ ವೈದ್ಯರು ತಿಳಿಸಿದ್ದಾರೆ.