ಸಿಸಿಬಿಗೆ ಹೆಚ್ಚಿನ ಶಕ್ತಿ ತುಂಬುವ ಹಿನ್ನಲೆ- ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ

ಬೆಂಗಳೂರು, ನ.೫-  ರೌಡಿಗಳಿಗೆ, ಮಾದಕ ವಸ್ತು ಸಾಗಾಣಿಕೆದಾರರಿಗೆ, ಮಹಿಳಾ ಪೀಡಿತರಿಗೆ  ಸಿಂಹಸ್ವಪ್ನವಾಗಿರುವ  ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ಕ್ಕೆ ಹೆಚ್ಚಿನ ಶಕ್ತಿ ತುಂಬಲಾಗಿದ್ದು, ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ.

ಉಗ್ರಗಾಮಿ  ಬೆಂಗಳೂರಿನಲ್ಲಿ ತಮ್ಮ ನೆಲೆ ಸ್ಥಾಪಿಸಿಕೊಳ್ಳಲು ಹವಣಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಿಸಿಬಿಯಲ್ಲಿ ಉಗ್ರಗಾಮಿ ನಿಗ್ರಹ ದಳವನ್ನು ಜಾರಿಗೆ ತರುವ ಮೂಲಕ ಭಯೋತ್ಪಾದನಾ ಕೃತ್ಯಗಳ ವಿರುದ್ಧ ಸಮರ ಸಾರಲು ಮುಂದಾಗಿದೆ.

ಯುವ ಸಮುದಾಯವನ್ನು ಹಾಳುಗೆಡುವ  ಮಾದಕ ವಸ್ತುಗಳ ಜಾಲ ನಿಯಂತ್ರಣಕ್ಕಾಗಿ ಸಿಸಿಬಿ ಈ ಹಿಂದಿಗಿAತಲೂ ಹೆಚ್ಚಿನ ಶಕ್ತಿ ಸಾಮರ್ಥ್ಯದೊಂದಿಗೆ ಅಖಾಡಕ್ಕಿಳಿಯುವ ನಿರೀಕ್ಷೆಗಳಿವೆ.

ಈ ಮೊದಲಿನ ಸಿಸಿಬಿ ಘಟಕದಲ್ಲಿ ಸಂಘಟಿತ ಅಪರಾಧ ವಿಭಾಗ, ಮಹಿಳೆ ಮತ್ತು ಮಾದಕ ವಸ್ತು ತಡೆ ವಿಭಾಗ, ವಿಶೇಷ ತನಿಖಾ ದಳ, ನರಹತ್ಯೆ ಮತ್ತು ಕಳ್ಳತನ ನಿಗ್ರಹ ದಳ, ವಂಚನೆ ನಿಗ್ರಹ ದಳ ಎಂದು ಐದು ವಿಭಾಗಗಳಿದ್ದವು. ಅವುಗಳಲ್ಲಿ ಆಮೂಲಾಗ್ರ  ಬದಲಾವಣೆ ಮಾಡಲಾಗಿದೆ.

ಪರಿಷ್ಕೃತ ಸಿಸಿಬಿಯಲ್ಲಿ ಸಂಘಟಿತ ಅಪರಾಧ ದಳ, ವಿಶೇಷ ವಿಚಾರಣಾ ದಳ, ಆರ್ಥಿಕ ಅಪರಾಧ ದಳವನ್ನು ಯಥಾರೀತಿ ಉಳಿಸಿಕೊಳ್ಳಲಾಗಿದೆ.ಮಾದಕ ವಸ್ತುಗಳ ದಳ ಮತ್ತು ಮಹಿಳಾ ಸುರಕ್ಷತಾ ದಳವನ್ನು ಪ್ರತ್ಯೇಕಗೊಳಿಸಲಾಗಿದೆ.

ಆಂತರಿಕ ಭದ್ರತೆಗೆ ಆದ್ಯತೆ ನೀಡಿದ್ದು, ಭಯೋತ್ಪಾದನಾ ನಿಗ್ರಹ ದಳ (ಎಟಿಸಿ)ವು ಉಗ್ರಗಾಮಿ ಚಟುವಟಿಕೆಗಳ  ಮಾಹಿತಿ ಸಂಗ್ರಹ, ದುಷ್ಕೃತ್ಯಗಳ ತನಿಖೆ, ನ್ಯಾಯಾಲಯದ ವಿಚಾರಣೆಯಲ್ಲಿರುವ ಪ್ರಕರಣಗಳ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.

ಮಹಿಳಾ ಸುರಕ್ಷತಾದಳ ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ತನಿಖೆ, ವೈಶಾವ್ಯಾಟಿಕೆ ನಿಯಂತ್ರಣ, ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಕಾರ್ಯಾಚರಣೆ ನಡೆಸುತ್ತದೆ.

ಈ ಮೊದಲು ಸಿಸಿಬಿಯಲ್ಲಿ ಎಸಿಪಿ ನೇತೃತ್ವದ ಮಹಿಳಾ ಮತ್ತು ಮಾದಕ ದ್ರವ್ಯ ವಿಭಾಗ ಕೆಲಸ ಮಾಡುತ್ತಿತ್ತು. ಈಗ ಮಾದಕ ದ್ರವ್ಯಗಳ ವಿಭಾಗ ಮತ್ತು ಮಹಿಳಾ ಸುರಕ್ಷತಾ ವಿಭಾಗವನ್ನು ಪ್ರತ್ಯೇಕಗೊಳಿಸಲಾಗಿದೆ.

ಭಾರೀ ಪ್ರಮಾಣದ ವಂಚನೆ, ಆರ್ಥಿಕ ಅಪರಾಧಗಳು,  ಸ್ಕೀಮ್‌ಗಳ ವಂಚನೆಯ ತಡೆಗೆ ಮತ್ತು ತನಿಖೆಗೆ ಆರ್ಥಿಕ ಅಪರಾಧ ದಳವನ್ನು ರಚಿಸಲಾಗಿದೆ.

ಮಾದಕ ದ್ರವ್ಯಗಳ ಅಕ್ರಮ ನಿಯಂತ್ರಣಕ್ಕಾಗಿ ಆ್ಯಂಟಿ ನಾರ್ಕೊಟಿಕ್ ದಳವನ್ನು, ಹಿರಿಯ ಅಧಿಕಾರಿಗಳಿಂದ ವಹಿಸಲಾಗುವ ಉನ್ನತ ಮಟ್ಟದ ತನಿಖೆಯ ಜವಾಬ್ದಾರಿ ನಿಭಾಯಿಸಲು ವಿಶೇಷ ವಿಚಾರಣಾ ದಳ, ರೌಡಿ ಚಟುವಟಿಕೆಗಳ ನಿಯಂತ್ರಣ ಹಾಗೂ ಸಂಘಟಿತ ಅಪರಾಧಗಳ ತನಿಖೆಗೆ ಸಂಘಟಿತ ಅಪರಾಧ ದಳವನ್ನು ರಚಿಸಲಾಗಿದೆ.

ನಗರದ ವಿಶೇಷ ತನಿಖಾ ಸಂಸ್ಥೆಯಾದ ಸಿಸಿಬಿಗೆ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರಿದೆ.ಅಪರಾಧಗಳ ನಿಯಂತ್ರಣಕ್ಕೆ ಸಿಸಿಬಿ ಮೊದಲಿನಿಂದಲೂ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.ಇದನ್ನು ಮತ್ತಷ್ಟು ಶಕ್ತಿಯುತಗೊಳಿಸಬೇಕೆಂಬ ಅಭಿಪ್ರಾಯಗಳು ಕೇಳಿ ಬರುತ್ತಿದ್ದವು.

ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಿಸಿಬಿಯನ್ನು ಪರಿಷ್ಕರಿಸುವುದಾಗಿ ಹೇಳಿದ್ದರು.

ರಾಷ್ಟ್ರೀಯ ಮಟ್ಟದಲ್ಲಿ ನಡೆದಿದ್ದ ಭಯೋತ್ಪಾದನೆ ನಿಗ್ರಹ ಕುರಿತ ವಿಚಾರ ಸಂಕಿರಣದಲ್ಲೂ ನಗರ ವ್ಯಾಪ್ತಿಗಳಲ್ಲಿರುವ ವಿಶೇಷ ತನಿಖಾ ದಳಗಳಲ್ಲಿ ಬದಲಾವಣೆ ಮಾಡುವಂತೆ ಸಲಹೆಗಳು ಕೇಳಿ ಬಂದಿದ್ದವು.

ಈ ಎಲ್ಲಾ  ಹಿನ್ನೆಲೆಯನ್ನು ಆಧರಿಸಿ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್, ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಆಮೂಲಾಗ್ರ ಬದಲಾವಣೆ ಮಾಡಿದ್ದು, ಹೊಸ ಬದಲಾವಣೆಯ ಉಸ್ತುವಾರಿಯನ್ನು ಅಪರಾಧ ವಿಭಾಗದ ಡಿಸಿಪಿಗಳಾದ ಕುಲದೀಪ್‌ಕುಮಾರ್ ಜೈನ್ ಮತ್ತು ಕೆ.ಪಿ.ರವಿಕುಮಾರ್ ಅವರಿಗೆ ವಹಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ