ಆಡಿಯೋ ಕುರಿತು ತನಿಖೆ ನಡೆಸಲು ಸಾಧ್ಯ ಇಲ್ಲ-ಸುಪ್ರೀಂಕೋರ್ಟ್

ನವದೆಹಲಿ,  ನ.೫-  ಮುಖ್ಯಮತ್ರಿ ಬಿ.ಎಸ್.ಯಡಿಯೂರಪ್ಪ ಅವರು ೧೭ ಮಂದಿ ಅನರ್ಹ ಶಾಸಕರ ಕುರಿತು ನೀಡಿರುವ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದ್ದು, ಇದರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದೆ.

ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ಪೀಠದ ಮುಂದೆ ಇಂದು ೧೭ ಮಂದಿ ಅನರ್ಹ ಶಾಸಕರ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಆಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬೇಕೆಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಾಲ್ ವಾದಿಸಿದ್ದರು.

ಆಡಿಯೋ ಕ್ಲಿಪ್ಪನ್ನು ಪರಿಗಣಿಸುವುದಾಗಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ ಮತ್ತು ಕೃಷ್ಣಮುರಾರಿ ಅವರುಗಳನ್ನೊಳಗೊಂಡ ಪೀಠ ಸ್ಪಷ್ಟಪಡಿಸಿದೆ.ಆದರೆ, ಆಡಿಯೋ ಕ್ಲಿಪ್ಪನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆಯೋ ಅಥವಾ ಔಪಚಾರಿಕವಾಗಿ ಪರಿಗಣಿಸಲಾಗುತ್ತದೆಯೋ ಎಂಬುದರ ಬಗ್ಗೆ ಸ್ಪಷ್ಟತೆ ನೀಡಿಲ್ಲ.

ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬಿಜೆಪಿ ಯೋಜನೆ ರೂಪಿಸಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಖುದ್ದಾಗಿ ಶಾಸಕರ ರಾಜೀನಾಮೆಯ ಉಸ್ತುವಾರಿ ವಹಿಸಿಕೊಂಡಿದ್ದರು. ೧೭ ಮಂದಿ ಶಾಸಕರಿಗೆ ಮುಂಬೈನಲ್ಲಿ ವಾಸ್ತವ್ಯ ಕಲ್ಪಿಸಿದ್ದರು.

ಅಮಿತ್ ಷಾ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಈ ಇಬ್ಬರೂ ವ್ಯವಸ್ಥಿತವಾದ ಯೋಜನೆ ರೂಪಿಸಿಯೇ ಸಂವಿಧಾನ ಬಾಹೀರವಾಗಿ ಸರ್ಕಾರ ಕೆಡವಿದ್ದಾರೆ. ಈಗ ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿಯ ಸಭೆಯಲ್ಲಿ ಈ ಬಗ್ಗೆ ಮಾತನಾಡಿ, ಸತ್ಯ ಒಪ್ಪಿಕೊಂಡಿದ್ದಾರೆ ಎಂದು ಕಪಿಲ್ ಸಿಬಾಲ್ ಹೇಳಿದರು.

ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಆಡಿರುವ ಮಾತುಗಳು ಏನು ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದಾಗ,  ಕಪಿಲ್ ಸಿಬಲ್ ಅವರು ಯಡಿಯೂರಪ್ಪ ಅವರ ಮಾತುಗಳನ್ನು  ಇಂಗ್ಲೀಷ್‌ಗೆ ಭಾಷಾಂತರಿಸಿ ಓದಿ ಹೇಳಿದರು.

ಸಿಡಿಯಲ್ಲಿನ ಅಷ್ಟೂ ಅಂಶಗಳನ್ನು ನೀವು ವಾದ ಮಂಡಿಸುವ ವೇಳೆ ಹೇಳಿದ್ದೀರಾ? ಮತ್ತೆ ಹೊಸದಾಗಿ ಎಲ್ಲಾ ವಿಷಯಗಳನ್ನು ಮತ್ತೊಮ್ಮೆ ವಾದ-ವಿವಾದ ಮಾಡುವ ಅಗತ್ಯವಿಲ್ಲ.  ಈಗಾಗಲೇ ವಿಚಾರಣೆ  ಮುಕ್ತಾಯಗೊಂಡಿದೆ. ತೀರ್ಪನ್ನು ಪ್ರಕಟಿಸಲು ನ್ಯಾಯಾಲಯಕ್ಕೆ ಅವಕಾಶ ಕೊಡಿ ಎಂದು ಸಲಹೆ ನೀಡಿದರು.

ಹೊಸದಾಗಿ ಸಾಕ್ಷ್ಯ ಅಥವಾ ದಾಖಲೆಗಳನ್ನು ಮಂಡಿಸಿದರೆ ಅದರ ವಿಚಾರಣೆಗೆ ಸಮಯ ಬೇಕಾಗುತ್ತದೆ. ಆಡಿಯೋದ ವಿಚಾರಣೆಯನ್ನೇ ಕೈಗೆತ್ತಿಕೊಳ್ಳುವುದಾದರೆ ಯಡಿಯೂರಪ್ಪ ಅವರಿಗೆ ನೋಟೀಸ್ ಕೊಡಬೇಕಾಗುತ್ತದೆ.ಇದರಿಂದ ವಿಚಾರಣೆ ಮತ್ತಷ್ಟು ವಿಳಂಬವಾಗುತ್ತದೆ. ಹೀಗಾಗಿ ಪ್ರಸ್ತು ನ್ಯಾಯಾಲಯದ ಮುಂದಿರುವಂತೆ ಶಾಸಕರ ಅನರ್ಹತೆ ಕುರಿತು ಸ್ಪೀಕರ್ ಅವರು ತೆಗೆದುಕೊಂಡ ತೀರ್ಮಾನದ ಬಗ್ಗೆ ತೀರ್ಪು ನೀಡಲು  ಅವಕಾಶ ನೀಡಿ ಎಂದು ಹೇಳಿದರು.

ಜೆಡಿಎಸ್‌ನ ಪರವಾದ ವಕೀಲ ರಾಜೀವ್ ಧವನ್ ಅವರು, ಕಾಂಗ್ರೆಸ್ ಪರ ವಕೀಲರ ವಾದವನ್ನು  ಬೆಂಬಲಿಸಿದರು.

ಅನರ್ಹ ಶಾಸಕರ ಪರವಾಗಿ ವಾದ ಮಂಡಿಸಿದ ವಕೀಲ ಸುಂದರಂ, ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರು ವಾದಿ ಅಥವಾ ಪ್ರತಿವಾದಿಯಾಗಿಲ್ಲ. ಅವರಿಗೂ ಪ್ರಕರಣಕ್ಕೂ ಸಂಬಂಧವಿಲ್ಲ. ಸಂಬಂಧವಿಲ್ಲದ ವ್ಯಕ್ತಿಗಳು ಸಾರ್ವಜನಿಕರ ವೇದಿಕೆಯಲ್ಲಿ ಆಡಿದ ಮಾತುಗಳನ್ನು ಸಾಕ್ಷ್ಯಗಳೆಂದು ಪರಿಗಣಿಸಲಾಗುವುದಿಲ್ಲ. ಮೇಲಾಗಿ ವಕೀಲರು ಸಲ್ಲಿಸಿರುವ ಆಡಿಯೋಗೆ ಎವಿಡೆನ್ಸ್ ಆ್ಯಕ್ಟ್ ೬೫(ಬಿ) ಅನುಸಾರ ಯಾವುದೇ ದೃಢೀಕರಣ ಇಲ್ಲ. ಹೀಗಾಗಿ ಆಡಿಯೋವನ್ನು ಪರಿಗಣಿಸಬಾರದು ಎಂದು ವಾದಿಸಿದರು.

ಅಂತಿಮವಾಗಿ ಆಡಿಯೋದಲ್ಲಿರುವ ಅಂಶಗಳು ಈಗಾಗಲೇ ವಾದ ಮಂಡನೆ ವೇಳೆ ಪ್ರಸ್ತಾಪವಾಗಿರುವುದರಿಂದ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.  ಹೊಸದಾಗಿ ಸಲ್ಲಿಕೆಯಾಗಿರುವ ಆಡಿಯೋ ಕುರಿತು ತನಿಖೆ ನಡೆಸಲು ಸಾಧ್ಯ ಇಲ್ಲ ಎಂದು  ಸ್ಪಷ್ಟವಾಗಿ ಹೇಳಿರುವ ಸುಪ್ರೀಂಕೋರ್ಟ್, ತೀರ್ಪು ನೀಡುವ ವೇಳೆ ಎಲ್ಲಾ ಅಂಶಗಳನ್ನು ಪರಿಗಣಿಸುವುದಾಗಿ ತಿಳಿಸಿ ವಿಚಾರಣೆಯನ್ನು ಮುಂದೂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ