ಬೆಂಗಳೂರು,ನ.೪- ತಂತ್ರಕ್ಕೆ ಪ್ರತಿತಂತ್ರ ಎಂಬಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಡಿಯೋ ಅಸ್ತ್ರಕ್ಕೆ ಪ್ರತಿಯಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯ ಕುರಿತಂತೆ ಹೇಳಿದ್ದ ಆಡಿಯೋವನ್ನು ನ್ಯಾಯಾಲಯಕ್ಕೆ ನೀಡಲು ಬಿಜೆಪಿ ಮುಂದಾಗಿದೆ.
ಒಂದು ವೇಳೆ ಯಡಿಯೂರಪ್ಪನವರ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ಕಾಂಗ್ರೆಸ್ ನ್ಯಾಯಾಲಯಕ್ಕೆ ದೂರು ನೀಡಿದರೆ ಸಿದ್ದರಾಮಯ್ಯನವರ ಆಡಿಯೋವನ್ನು ಕೂಡ ತನಿಖೆಗೆ ಒಳಪಡಿಸಬೇಕೆಂದು ಬಿಜೆಪಿ ಪ್ರತಿ ಅಸ್ತ್ರ ಬಳಸಲು ಮುಂದಾಗಿದೆ.
ಯಡಿಯೂರಪ್ಪ ಸ್ವಪಕ್ಷೀಯರ ವಿರುದ್ಧವೇ ಪಕ್ಷದ ಕಾರ್ಯಕ್ರಮದಲ್ಲಿ ಅಸಮಾಧಾನ ಹೊರಹಾಕಿದ್ದರು. ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಲೇ ಬಿಜೆಪಿ ಸರ್ಕಾರ ರಚನೆಯಾಗಲು ಸಾಧ್ಯವಾಯಿತು. ಆದರೆ ನಮ್ಮ ಪಕ್ಷದವರೇ ಅವರ ವಿರುದ್ದ ತಲೆಗೊಬ್ಬರಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಈ ಆಡಿಯೋವನ್ನು ಮುಂದಿಟ್ಟುಕೋಂಡಿರುವ ಕಾಂಗ್ರೆಸ್ ಯಡಿಯೂರಪ್ಪನವರ ಹೇಳಿಕೆಯನ್ನೇ ಸಾಕ್ಷಿಯನ್ನಾಗಿ ಪರಿಗಣಿಸಲು ನ್ಯಾಯಾಲಯದ ಮೊರೆ ಹೋಗಲಿದೆ.
ಇದಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ ಸಿದ್ದರಾಮಯ್ಯನವರ ಆಡಿಯೋವನ್ನು ಕೂಡ ಪರಿಗಣಿಸಬೇಕೆಂದು ತಮ್ಮ ವಕೀಲರ ಮೂಲಕ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಮನವಿ ಮಾಡಲಿದೆ.
ಈ ಹಿಂದೆ ಸಿದ್ದರಾಮಯ್ಯ ಧರ್ಮಸ್ಥಳ ಸಮೀಪದ ಪ್ರಕೃತಿ ಚಿಕಿತ್ಸಾಲಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಉಳಿಯುವ ಬಗ್ಗೆ ನಾನು ಏನೂ ಹೇಳಲು ಸಾಧ್ಯವಿಲ್ಲ ವೆಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೆಚ್ಚೆಂದರೆ ಲೋಕಸಭೆ ಚುನಾವಣೆವರೆಗೂ ಇರಬಹುದು. ಬಳಿಕ ಸರ್ಕಾರದ ಅಸ್ತಿತ್ವದ ಬಗ್ಗೆ ನಾನು ಏನೂ ಹೇಳಲಾರೆ ಎಂದು ಹೇಳಿರುವುದು ಕೂಡ ಸರ್ಕಾರವನ್ನು ಪತನಗೊಳಿಸುವ ಸಂಚಾಗಿದೆ. ಹೀಗಾಗಿ ಇದನ್ನು ಕೂಡ ಸಾಕ್ಷಿಯಾಗಿ ಪರಿಗಣಿಸುವಂತೆ ತ್ರಿಸದಸ್ಯ ಪೀಠಕ್ಕೆ ಹಿರಿಯ ವಕೀಲ ಮುಕುಲ್ ರೋಹ್ಟಗಿ ಸುಪ್ರೀಂಕೋರ್ಟ್ಗೆ ಮನವಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ರೋಹ್ಟಗಿ ಜೊತೆ ಮಾತುಕತೆ ನಡೆಸಿದ್ದು, ನ್ಯಾಯಾಲಯಕ್ಕೆ ಮನವಿ ಮಾಡುವ ಸಂಬAಧ ಬೇಕಾದ ಸಾಕ್ಷಾಧಾರಗಳನ್ನು ಒದಗಿಸಿದ್ದಾರೆ.
ಈ ಮೂಲಕ ಕಾಂಗ್ರೆಸ್ನ ತಂತ್ರಕ್ಕೆ ಬಿಜೆಪಿ ಕೂಡ ಪ್ರತಿ ತಂತ್ರವನ್ನು ಹೆಣೆದಿದೆ. ಸಿದ್ದರಾಮಯ್ಯ ಯಾವ ಆಧಾರದಲ್ಲಿ ಸರ್ಕಾರ ಉಳಿಯುವುದಿಲ್ಲ ಎಂದು ಹೇಳಿದ್ದರು, ತಮ್ಮ ಆಪ್ತರ ಜೊತೆ ಇದನ್ನು ಪ್ರಸ್ತಾಪಿಸಲು ಕಾರಣವೇನು? ಇದನ್ನು ಕೂಡ ಸಾಕ್ಷಿಯನ್ನಾಗಿ ಏಕೆ ಪರಿಗಣಿಸಬಾರದೆಂದು ಕೋರಲಿದ್ದಾರೆ.
ಅಲ್ಲದೆ ಕಾಂಗ್ರೆಸ್ ಅನರ್ಹಗೊಂಡಿರುವ ಶಾಸಕರು ನಾವು ಮುಂಬೈಗೆ ಹೋಗುವುದಾಗಿ ಸಿದ್ದರಾಮಯ್ಯನವರಿಗೆ ಹೇಳಿದ್ದೆವು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಇದರ ಬಗ್ಗೆಯೂ ತನಿಖೆ ನಡೆಸಲು ವಕೀಲರು ಪೀಠಕ್ಕೆ ಮನವಿ ಮಾಡುವರು.