ಯಡಿಯೂರಪ್ಪನವರ ಆಡಿಯೋವನ್ನು ಸಾಕ್ಷಿಯನ್ನಾಗಿ ಸುಪ್ರೀಂಕೋರ್ಟ್ ಪರಿಗಣನೆ-ಆತಂಕಕ್ಕೊಳಗಾದ ಅನರ್ಹ ಶಾಸಕರು

ಬೆಂಗಳೂರು, ನ.೪-ಸುಪ್ರೀಂಕೋರ್ಟ್ ಯಡಿಯೂರಪ್ಪ ಅವರ ಆಡಿಯೋವನ್ನು ಸಾಕ್ಷಿಯನ್ನಾಗಿ ಪರಿಗಣಿಸುತ್ತಿದ್ದಂತೆ ಆತಂಕಕ್ಕೊಳಗಾದ ಅನರ್ಹ ಶಾಸಕರು ಇಂದು ಮಾಜಿ ಸಚಿವ ರಮೇಶ್‌ಜಾರಕಿ ಹೊಳಿ ಮನೆಯಲ್ಲಿ ತುರ್ತು ಸಭೆ ನಡೆಸಿ ಮುಂದಿನ ಭವಿಷ್ಯದ ಬಗ್ಗೆ ಗಂಭೀರ ಸಮಾಲೋಚನೆ ನಡೆಸಿದರು.

ಇಂದು ಬೆಳಗ್ಗೆ ಬಾಲಬ್ರೂಯಿ ಅತಿಥಿ ಗೃಹ ಸಮೀಪ ಇರುವ ಸೆವೆನ್ ಮಿನಿಸ್ರ‍್ಸ್ ಕ್ವಾಟ್ರರ್ಸ್ನ  ರಮೇಶ್ ಜಾರಕಿ ಹೊಳಿ ಅವರ ಸರ್ಕಾರಿ ಬಂಗಲೆಯಲ್ಲಿ ಅನರ್ಹರು  ಶಾಸಕರು ಸಭೆ ನಡೆಸಿದರು.

ಶುಕ್ರವಾರ ಬಿಡುಗಡೆಯಾದ ಯಡಿಯೂರಪ್ಪ ಅವರ ಆಡಿಯೋ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಶನಿವಾರ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಆಡಿಯೋವನ್ನು ಸಲ್ಲಿಸಿ ದೂರು ನೀಡಿದ್ದರು. ಇಂದು ಸುಪ್ರೀಂಕೋರ್ಟ್ ಇದೇ ಪುರಾವೆಯನ್ನು ಸಲ್ಲಿಸಿ ಪ್ರಮುಖ ಸಾಕ್ಷ್ಯವನ್ನಾಗಿ ಪರಿಗಣಿಸುವಂತೆ ಮನವಿ ಮಾಡಲಾಯಿತು.

ಕಾಂಗ್ರೆಸ್ ಪರವಾದ ವಕೀಲರ ಮನವಿಗೆ ಸಹಮತ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಯಡಿಯೂರಪ್ಪ ಅವರ ಆಡಿಯೋವನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲು ಸಮ್ಮತಿಸಿದೆ. ಈವರೆಗೂ ನ್ಯಾಯಾಂಗ ಹೋರಾಟದಲ್ಲಿ ತಮಗೆ ಜಯ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಅನರ್ಹ ಶಾಸಕರಿಗೆ ಏಕಾಏಕಿ ತಳಮಳ ಉಂಟಾಗಿದೆ.

ಒಂದು ವೇಳೆ ಆಡಿಯೋ ಪ್ರಕರಣ ಗಂಭೀರ ಸ್ವರೂಪಕ್ಕೆ ತಿರುಗಿ ಕಾನೂನು ಹೋರಾಟದಲ್ಲಿ ನಮಗೆ ಹಿನ್ನಡೆಯಾದರೆ ಎಂಬ ಆತಂಕ ಎಲ್ಲಾ ಅನರ್ಹ ಶಾಸಕರನ್ನು ಕಾಡುತ್ತಿದೆ. ಹೀಗಾಗಿ ನಿನ್ನೆ ದಿಢೀರ್ ಎಂದು ರಮೇಶ್ ಜಾರಕಿ ಹೊಳಿ ಬೆಂಗಳೂರಿಗೆ ಆಗಮಿಸಿದರು.ಬಹಳಷ್ಟು ಅನರ್ಹ ಶಾಸಕರು ಇಂದು ಅವರೊಂದಿಗೆ ಸಭೆ ನಡೆಸಿ ತಮ್ಮ ದುಗುಡವನ್ನು ತೋಡಿಕೊಂಡರು.

ಉಪಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡಲು ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಈಗ ಈ ಆಡಿಯೋ ಪ್ರಕರಣದಿಂದ ಬೇರೆ ಯಾವ ತಿರುವು ಸಿಗಲಿದೆಯೋ ಗೊತ್ತಿಲ್ಲ. ಒಂದು ವೇಳೆ ನಮಗೆ ಸ್ಪರ್ಧಿಸಲು ಅವಕಾಶ ಸಿಗದೆ ಇದ್ದರೆ, ನ್ಯಾಯಾಲಯ ಸ್ಪೀಕರ್ ಆದೇಶ ಎತ್ತಿ ಹಿಡಿದರೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ವಕೀಲರ ಜೊತೆ ಚರ್ಚಿಸಿ ಮುಂದಿನ ಬೆಳವಣಿಗೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ