ಆಪರೇಷನ್​ ಕಮಲದ ಕುರಿತು ಸಿಎಂ ಬಿಎಸ್​ವೈ ಆಡಿಯೋ: ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್​

ನವದೆಹಲಿ: ಆಪರೇಷನ್ ಕಮಲ ಬಗ್ಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಆಡಿಯೋ ವಿಚಾರವನ್ನು ಕಾಂಗ್ರೆಸ್​ ಸುಪ್ರೀಂ ಕೋರ್ಟ್​ಗೆ ಕೊಂಡೊಯ್ದಿದೆ. ಇಂದು ಸುಪ್ರೀಂ ಕೋರ್ಟ್​ನಲ್ಲಿ ಕಾಂಗ್ರೆಸ್​ ಹಿರಿಯ ಮುಖಂಡ ಮತ್ತು ಹಿರಿಯ ನ್ಯಾಯವಾದಿ ಕಪಿಲ್​ ಸಿಬಲ್​ ನ್ಯಾಯಮೂರ್ತಿ ರಮಣ್​ ನೇತೃತ್ವದ ಪೀಠದಲ್ಲಿ ಯಡಿಯೂರಪ್ಪ ಆಡಿಯೋ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಆಪರೇಷನ್​ ಕಮಲದ ಉಸ್ತುವಾರಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ಕೇಂದ್ರ ಗೃಹಸಚಿವ ಅಮಿತ್​ ಶಾ ಅವರೇ ಹೊತ್ತಿದ್ದರು ಎಂದು ಮಾತನಾಡಿದ್ದರು ಎನ್ನಲಾಗಿತ್ತು. ಬಿಎಸ್​ ಯಡಿಯೂರಪ್ಪ ಧ್ವನಿಯನ್ನೇ ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ಜತೆಗೆ ಕಾಂಗ್ರೆಸ್​ ರಾಜ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರು ಬಿಜೆಪಿಯ ವಿರುದ್ಧ ಈ ಆಡಿಯೋವನ್ನು ಅಸ್ತ್ರವಾಗಿ ಬಳಸಿದ್ದರು.

ಬಿಎಸ್​ವೈ ಅವರದ್ದು ಎನ್ನಲಾದ ಆಡಿಯೋ ವಿಚಾರವನ್ನು ಇಂದು ಸುಪ್ರೀಂ ಕೋರ್ಟ್​ ಗಮನಕ್ಕೆ ತಂದಿರುವ ಕಪಿಲ್​ ಸಿಬಲ್​, ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್​ ಅವರ ಗಮನಕ್ಕೆ ತಂದು ಹೊಸ ಪೀಠ ರಚನೆಗೆ ಮನವಿ ಮಾಡಲಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಒಪ್ಪಿದ್ದೇ ಆದಲ್ಲಿ ಮಂಗಳವಾರ ಮತ್ತೆ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಅನರ್ಹ ಶಾಸಕರ ಅರ್ಜಿ ವಿಚಾರಣೆಯ ನಂತರ ಮಹತ್ವದ ಬೆಳವಣಿಗೆ ಆಗಿದೆ. ಈ ಬೆಳವಣಿಗೆಯನ್ನು ಕೋರ್ಟ್​ ಗಮನಕ್ಕೆ ತರಬೇಕು. ಆಪರೇಷನ್​ ಕಮಲದ ಆಡಿಯೋ ಕ್ಲಿಪ್​ ಲೀಕ್​ ಆಗಿದೆ, ಯಡಿಯೂರಪ್ಪ ಆಡಿಯೋ ಸುಪ್ರೀಂ ಕೋರ್ಟ್​ ಪರಿಗಣಿಸಬೇಕು ಎಂದು ಕಪಿಲ್​ ಸಿಬಲ್​ ಕೋರ್ಟ್​ಗೆ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಒಂದೆಡೆ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್​ ಯಾವ ರೀತಿಯ ತೀರ್ಪು ನೀಡಲಿದೆ ಎಂಬ ಇಕ್ಕಟ್ಟು. ಇನ್ನೊಂದು ಕಡೆ ಯಡಿಯೂರಪ್ಪ ಅವರ ಆಡಿಯೋದಿಂದ ಮತ್ತಷ್ಟು ಸಂಕಷ್ಟ. ಡಿಸೆಂಬರ್​ 5ರೊಳಗೆ ಕರ್ನಾಟಕದ ಉಪಚುನಾವಣೆಯನ್ನು ಮಾಡುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಅನರ್ಹರ ಭವಿಷ್ಯ ಇನ್ನಷ್ಟು ಕಂಗಟಾಗುವತ್ತ ಸಾಗುತ್ತಿದೆ. ಸುಪ್ರೀಂ ಕೋರ್ಟ್​ ತೆಗೆದುಕೊಳ್ಳುವ ಮಹತ್ವದ ನಿರ್ಧಾರದ ಮೇಲೆ ಅನರ್ಹರ ರಾಜಕೀಯ ಅಳಿವು – ಉಳಿವು ನಿರ್ಧರಿತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ