ನವದೆಹಲಿ: ಆಪರೇಷನ್ ಕಮಲ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಡಿಯೋ ವಿಚಾರವನ್ನು ಕಾಂಗ್ರೆಸ್ ಸುಪ್ರೀಂ ಕೋರ್ಟ್ಗೆ ಕೊಂಡೊಯ್ದಿದೆ. ಇಂದು ಸುಪ್ರೀಂ ಕೋರ್ಟ್ನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ನ್ಯಾಯಮೂರ್ತಿ ರಮಣ್ ನೇತೃತ್ವದ ಪೀಠದಲ್ಲಿ ಯಡಿಯೂರಪ್ಪ ಆಡಿಯೋ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಪರೇಷನ್ ಕಮಲದ ಉಸ್ತುವಾರಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರೇ ಹೊತ್ತಿದ್ದರು ಎಂದು ಮಾತನಾಡಿದ್ದರು ಎನ್ನಲಾಗಿತ್ತು. ಬಿಎಸ್ ಯಡಿಯೂರಪ್ಪ ಧ್ವನಿಯನ್ನೇ ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಜತೆಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಬಿಜೆಪಿಯ ವಿರುದ್ಧ ಈ ಆಡಿಯೋವನ್ನು ಅಸ್ತ್ರವಾಗಿ ಬಳಸಿದ್ದರು.
ಬಿಎಸ್ವೈ ಅವರದ್ದು ಎನ್ನಲಾದ ಆಡಿಯೋ ವಿಚಾರವನ್ನು ಇಂದು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿರುವ ಕಪಿಲ್ ಸಿಬಲ್, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ಗಮನಕ್ಕೆ ತಂದು ಹೊಸ ಪೀಠ ರಚನೆಗೆ ಮನವಿ ಮಾಡಲಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಒಪ್ಪಿದ್ದೇ ಆದಲ್ಲಿ ಮಂಗಳವಾರ ಮತ್ತೆ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಅನರ್ಹ ಶಾಸಕರ ಅರ್ಜಿ ವಿಚಾರಣೆಯ ನಂತರ ಮಹತ್ವದ ಬೆಳವಣಿಗೆ ಆಗಿದೆ. ಈ ಬೆಳವಣಿಗೆಯನ್ನು ಕೋರ್ಟ್ ಗಮನಕ್ಕೆ ತರಬೇಕು. ಆಪರೇಷನ್ ಕಮಲದ ಆಡಿಯೋ ಕ್ಲಿಪ್ ಲೀಕ್ ಆಗಿದೆ, ಯಡಿಯೂರಪ್ಪ ಆಡಿಯೋ ಸುಪ್ರೀಂ ಕೋರ್ಟ್ ಪರಿಗಣಿಸಬೇಕು ಎಂದು ಕಪಿಲ್ ಸಿಬಲ್ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಒಂದೆಡೆ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಯಾವ ರೀತಿಯ ತೀರ್ಪು ನೀಡಲಿದೆ ಎಂಬ ಇಕ್ಕಟ್ಟು. ಇನ್ನೊಂದು ಕಡೆ ಯಡಿಯೂರಪ್ಪ ಅವರ ಆಡಿಯೋದಿಂದ ಮತ್ತಷ್ಟು ಸಂಕಷ್ಟ. ಡಿಸೆಂಬರ್ 5ರೊಳಗೆ ಕರ್ನಾಟಕದ ಉಪಚುನಾವಣೆಯನ್ನು ಮಾಡುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಅನರ್ಹರ ಭವಿಷ್ಯ ಇನ್ನಷ್ಟು ಕಂಗಟಾಗುವತ್ತ ಸಾಗುತ್ತಿದೆ. ಸುಪ್ರೀಂ ಕೋರ್ಟ್ ತೆಗೆದುಕೊಳ್ಳುವ ಮಹತ್ವದ ನಿರ್ಧಾರದ ಮೇಲೆ ಅನರ್ಹರ ರಾಜಕೀಯ ಅಳಿವು – ಉಳಿವು ನಿರ್ಧರಿತವಾಗಿದೆ.