ಬೆಂಗಳೂರು, ನ.೩-ಅನರ್ಹರ ರಾಜೀನಾಮೆಗೂ ನಮಗೂ ಸಂಬAಧವಿಲ್ಲ. ನನ್ನ ಹೇಳಿಕೆಗಳನ್ನು ತಿರುಚಿ ನ್ಯಾಯಾಲಯದ ದಿಕ್ಕುತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಚಾರದ ಹುಚ್ಚು. ಪ್ರತಿದಿನ ಸುದ್ದಿಯಾಗಬೇಕೆಂಬ ಕಾರಣಕ್ಕಾಗಿ ನನ್ನ ಹೇಳಿಕೆಗಳನ್ನು ತಿರುಚಿದ್ದಾರೆ.ವಕೀಲರಾಗಿದ್ದ ಸಿದ್ದರಾಮಯ್ಯ ಅವರಿಗೆ ಕಾಮನ್ ಸೆನ್ಸ್ ಇಲ್ಲ,ವ್ಯವಹಾರಿಕ ಜ್ಞಾನವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾನು ಆಡಿರುವ ಮಾತುಗಳನ್ನು ಆಧರಿಸಿ ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದು ಹುಚ್ಚುತನದ ಪರಮಾವಧಿ. ಸಿದ್ದರಾಮಯ್ಯ ಅವರ ಆರೋಪಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಖುದ್ದು ಕಾಂಗ್ರೆಸ್ನವರೇ ಅವರ ಮಾತನ್ನು ಒಪ್ಪುವುದಿಲ್ಲ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.
ಕಾಂಗ್ರೆಸ್-ಜೆಡಿಎಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಲ ಶಾಸಕರು ಮುಂಬೈನಲ್ಲಿದ್ದುದು ದೇಶಕ್ಕೆ ಗೊತ್ತಿರುವ ವಿಚಾರ.ನಾನು ಅದನ್ನೇ ಹೇಳಿದ್ದೇನೆ. ಇದನ್ನು ತಿರುಚಿ ಸಿದ್ದರಾಮಯ್ಯ ನ್ಯಾಯಾಲಯದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತನ್ನಷ್ಟಕ್ಕೇ ತಾನು ದೊಡ್ಡ ಲೀಡರ್ ಎಂದುಕೊಂಡಿದ್ದಾರೆ. ಇವರಿಗೆ ಉಪಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಅನರ್ಹ ಶಾಸಕರ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಸ್ಥಾನಕ್ಕೆ ಅಮಿತ್ ಷಾ ರಾಜೀನಾಮೆ ನೀಡಬೇಕು ಎಂದು ಹೇಳುತ್ತಿರುವುದು ಹುಚ್ಚುತನ ಪರಮಾವಧಿ ಎಂದು ಯಡಿಯೂರಪ್ಪ ಹೇಳಿದ್ದಲ್ಲದೆ, ಜನ ಕಾಂಗ್ರೆಸ್ಗೆ ಛೀಮಾರಿ ಹಾಕುತ್ತಾರೆ ಎನ್ನುವ ಬದಲಾಗಿ ಸರ್ಕಾರಕ್ಕೆ ಛೀಮಾರಿ ಹಾಕುತ್ತಾರೆ ಎಂದು ಬಾಯಿತಪ್ಪಿ ಹೇಳಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನರ್ಹ ಶಾಸಕರಿಗೆ ನಾವು ಟಿಕೆಟ್ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಅವರದೇ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.ಸಂದರ್ಭ ಬಂದರೆ ಅವರ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ.ನಾನು ಅವರಿಗೆ ಸೀಟು ಕೊಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟು ಎರಡು ತಿಂಗಳ ಕಾಲ ಮುಂಬೈನಲ್ಲಿ ಹೆಂಡತಿ-ಮಕ್ಕಳನ್ನು ಬಿಟ್ಟು ಉಳಿದುಕೊಂಡಿದ್ದರು.ಕ್ಷೇತ್ರದತ್ತಲೂ ಮುಖಮಾಡಿರಲಿಲ್ಲ. ಅವರು ತ್ಯಾಗ ಮಾಡದಿದ್ದರೆ ಇನ್ನೂ ಮೂರೂವರೆ ವರ್ಷ ಬಿಜೆಪಿ ವಿರೋಧ ಪಕ್ಷದಲ್ಲೇ ಕೂರಬೇಕಿತ್ತು. ಅವರು ಮುಂಬೈಗೆ ತೆರಳುವ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಿಯೇ ಹೋಗಿದ್ದರು. ಅವರನ್ನು ನಂಬಿಸಿ ರಾಜೀನಾಮೆ ಕೊಡಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೂಲಕ ನಾನು ಅಪರಾಧ ಮಾಡಿದ್ದೇನೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿರುವ ಕುರಿತು ಆಡಿಯೋ ಟೇಪ್ನಲ್ಲಿ ಧ್ವನಿಮುದ್ರಣವಾಗಿದೆ.
ನಿನ್ನೆ ಖಾಸಗಿ ಚಾನೆಲ್ಗೆ ಸಂದರ್ಶನ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆ ಆಡಿಯೋ ಧ್ವನಿಯನ್ನು ತಮ್ಮದೇ ಎಂದು ಒಪ್ಪಿಕೊಂಡಿದ್ದರು.
ಇದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಮುಖ ಸಾಕ್ಷಿಯನ್ನಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿತ್ತು.ಇಂದು ಬೆಳಗ್ಗೆ ಯೂಟರ್ನ್ ಪಡೆದ ಯಡಿಯೂರಪ್ಪ ಅವರು ತಮ್ಮ ಹೇಳಿಕೆ ತಿರುಚಲಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.