ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ-ಎಲ್ಲಾ ರೀತಿಯ ತಯಾರಿ

ಬೆಂಗಳೂರು, ನ.೩-ಕಷ್ಟ ಕಾಲದಲ್ಲೂ ಪಕ್ಷನಿಷ್ಠೆ ಬದಲಿಸದೆ ದೃಢವಾಗಿ ನಿಂತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಲು ಎಲ್ಲಾ ರೀತಿಯ ತಯಾರಿ ನಡೆದಿದ್ದು, ಉಪಚುನಾವಣೆಗೂ ಮೊದಲೇ ಹೈಕಮಾಂಡ್ ಆದೇಶ ಜಾರಿ ಮಾಡುವ ಸಾಧ್ಯತೆಗಳಿವೆ.

ರಾಜ್ಯಸಭೆ ಚುನಾವಣೆ ವೇಳೆ ಗುಜರಾತ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಶಾಸಕರಿಗೆ ರಕ್ಷಣೆ ಮತ್ತು ಆತಿಥ್ಯ ನೀಡಲು ಹೋಗಿ ಡಿ.ಕೆ.ಶಿವಕುಮಾರ್ ಐಟಿ ದಾಳಿಗೆ ಸಿಲುಕುವಂತಾಯಿತು.

ದಾಳಿಯ ಸ್ವರೂಪ ದಿನೇ ದಿನೇ ಬದಲಾಗಿದ್ದು, ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೂ ಒಳಗಾಗುವ ಪರಿಸ್ಥಿತಿ ಬಂತು.೪೮ ದಿನಗಳ ಕಾಲ ನ್ಯಾಯಾಂಗ ಬಂಧನದ ಅವಧಿ ಮುಗಿಸಿ ಬಿಡುಗಡೆಯಾದ ಡಿ.ಕೆ.ಶಿವಕುಮಾರ್ ಅವರು ಈ ಕ್ಷಣಕ್ಕೂ ಕಾಂಗ್ರೆಸ್ ಪಕ್ಷದ ಪರವಾಗಿಯೇ ನಿಂತು ಧ್ವನಿ ಎತ್ತುತ್ತಿದ್ದಾರೆ.

ಬಿಜೆಪಿ ವಿರುದ್ಧ ಮೊದಲಿನಷ್ಟು ಕಠೋರ ಭಾಷೆ ಬಳಸದಿದ್ದರೂ ಅವರ ಟೀಕೆಯ ಪ್ರಖರತೆ ಕಡಿಮೆಯಾಗಿಲ್ಲ.ಜೈಲು ಪಾಲಾದ ಬಳಿಕ ಡಿ.ಕೆ.ಶಿವಕುಮಾರ್ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಉಪಚುನಾವಣೆ ಬಳಿಕ ರಾಜಕಾರಣ ಯಾವ ತಿರುವನ್ನಾದರೂ ಪಡೆಯಬಹುದು.ಸದ್ಯಕ್ಕೆ ಈಗ ಪ್ರಮುಖ ಸ್ಥಾನ ವಹಿಸಿರುವ ಸಿದ್ದರಾಮಯ್ಯ ಮತ್ತು ದಿನೇಶ್‌ಗುಂಡೂರಾವ್ ಅವರು ಜೆಡಿಎಸ್ ಜೊತೆಗಿನ ಪುನರ್ ಮೈತ್ರಿಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ನಾಯಕರ ಜೊತೆ ಉತ್ತಮ ಬಾಂಧವ್ಯ ಕಾಯ್ದುಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನ ಗೆಲ್ಲದೆ ಇದ್ದರೆ ಸರ್ಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆ ವೇಳೆ ಬಿಜೆಪಿ ಜೆಡಿಎಸ್-ಕಾಂಗ್ರೆಸ್‌ನ ಮತ್ತಷ್ಟು ಅತೃಪ್ತರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡಬಹುದು.

ಈ ಮೊದಲು ನಡೆದ ಆಪರೇಷನ್ ಕಮಲವನ್ನು ತಡೆಯುವ ಸಾಧ್ಯತೆ ಇದ್ದರೂ ಕಾಂಗ್ರೆಸ್ ನಾಯಕರು ಗಂಭೀರ ಪ್ರಯತ್ನ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಮತ್ತದೆ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ಇನ್ನಷ್ಟು ಶಾಸಕರನ್ನು  ಕಳೆದುಕೊಳ್ಳಬೇಕಾಗಬಹುದು. ಅದಕ್ಕಾಗಿ ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷ ಸ್ಥಾನದಲ್ಲಿದ್ದರೆ  ಪಕ್ಷಕ್ಕೆ ಬಲ ಬರುತ್ತದೆ. ಸಂಘಟನೆಗೆ ಶಕ್ತಿ ಇರುತ್ತದೆ ಎಂಬ ಲೆಕ್ಕಾಚಾರಗಳು ನಡೆದಿವೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಷ್ಟೆಲ್ಲ ಕಿರುಕುಳ ನೀಡಿದರೂ ಹೈಕಮಾಂಡ್ ಜೊತೆಗಿನ ಗುಟ್ಟನ್ನು ಬಿಟ್ಟುಕೊಡದೆ ರಹಸ್ಯ ಕಾಪಾಡಿಕೊಂಡು ಬಂದ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದು ಸೂಕ್ತ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಪಟ್ಟು ಹಿಡಿದಿದ್ದಾರೆ.

ಇದಕ್ಕೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಬಣ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಡಿ.ಕೆ.ಶಿವಕುಮಾರ್ ಅವರ ಮೇಲಿರುವ ಪ್ರಕರಣಗಳ  ವಿಚಾರಣೆ ಪೂರ್ಣಗೊಂಡಿಲ್ಲ. ಯಾವ ಸಂದರ್ಭದಲ್ಲಾದರೂ ಜಾಮೀನು ರದ್ದುಗೊಂಡು ಅವರು ಮತ್ತೆ ಜೈಲು ಸೇರಬಹುದು. ಒಂದು ವೇಳೆ ಹಾಗಾದರೆ  ಕೆಪಿಸಿಸಿ ಅಧ್ಯಕ್ಷರು ಜೈಲಿಗೆ ಹೋದರು ಎಂಬ ಅಪಕೀರ್ತಿ ಪಕ್ಷಕ್ಕೆ ಖಾಯಂ ಆಗಿ ಉಳಿಯುತ್ತದೆ. ಹಾಗಾಗಿ ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ದಿನೇಶ್‌ಗುಂಡೂರಾವ್ ಅವರನ್ನೇ ಮುಂದುವರೆಸಿ ಎಂದು ಸಿದ್ದು ಬಣ ಒತ್ತಡ ಹೇರಲಾರಂಭಿಸಿದೆ.

ಈ ಹಗ್ಗಾ-ಜಗ್ಗಾಟದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ