ಬೆ0ಗಳೂರು,ನ.೩- ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿರುವ ಆಡಿಯೋವನ್ನು ಬಿಜೆಪಿಯವರೇ ಬಿಡುಗಡೆ ಮಾಡಿದ್ದಾರೆ. ಸದ್ಯಕ್ಕೆ ನಮಗೆ ಆಡಿಯೋ ಬಿಡುಗಡೆಯಾಗಿರುವುದು ಮುಖ್ಯವಲ್ಲ. ಅದರಲ್ಲಿರುವ ಅಂಶಗಳು ಪ್ರಮುಖವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಜನರಿಂದ ಚುನಾಯಿತವಾಗಿದ್ದ ಸರ್ಕಾರವನ್ನು ಸಂವಿಧಾನ ಬಾಹಿರವಾಗಿ ಕೆಡವಲು ಏನೇಲ್ಲ ಪ್ರಯತ್ನ ಮಾಡಿದ್ದೇವೆ ಎಂದು ಯಡಿಯೂರಪ್ಪ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬಿಜೆಪಿ ರಾಷ್ಟಿಯ ಅಧ್ಯಕ್ಷ ಅಮಿತ್ ಷಾ ಎರಡು ತಿಂಗಳ ಕಾಲ ಅತೃಪ್ತ ಶಾಸಕರನ್ನು ಮುಂಬೈನಲ್ಲಿ ಇಟ್ಟುಕೊಂಡಿದ್ದರು ಎಂಬುದನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಇದು ಸುಪ್ರೀಂಕೋರ್ಟ್ನ ವಿಚಾರಣೆ ವೇಳೆ ಪ್ರಮುಖ ಸಾಕ್ಷಿಯಾಗಲಿದೆ.
ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಸಂಚಿನ ಭಾಗ ಎಂದು ಸ್ಪಷ್ಟವಾಗಿದೆ. ಹೀಗಾಗಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ಸ್ಪೀಕರ್ ಅವರ ತೀರ್ಮಾನ ಸರಿ ಇದೆ. ರಾಜೀನಾಮೆ ನೀಡಿರುವುದು ಸ್ವಂತ ನಿರ್ಧಾರವಾಗಿರಬೇಕು ಮತ್ತು ಸಮರ್ಪಕ ಕಾರಣಗಳಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಪಕ್ಷಾಂತರ ಕಾಯ್ದೆಯಲ್ಲಿ ಅವಕಾಶವಿದೆ. ಹಾಗಾಗಿ ಸ್ಪೀಕರ್ ಅವರು ಪರಿಶೀಲಿಸಿದಾಗ ಕಾರಣಗಳು ಸರಿಯಿಲ್ಲ ಎಂಬುದು ಸ್ಪಷ್ಟವಾಗಿಯೇ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ ಎಂದರು.