ಆಡಿಯೋ ವಿವಾದ: ಸಿದ್ದರಾಮಯ್ಯಗೆ ಕಾಮನ್​ಸೆನ್ಸ್ ಇಲ್ಲ ಎಂದ ಸಿಎಂ

ಬೆಂಗಳೂರು: ಮೊನ್ನೆಯ ಬಿಜೆಪಿ ಕೋರ್ ಕಮಿಟಿ ಸಭೆಯ ವೇಳೆ ಯಡಿಯೂರಪ್ಪ ಅವರು ಆಪರೇಷನ್ ಕಮಲದ ಬಗ್ಗೆ ಮಾತನಾಡಿರುವ ಹೊಸ ಆಡಿಯೋ ವೈರಲ್ ಆಗಿದೆ. ಬಿಜೆಪಿಯವರು ಶಾಸಕರಿಗೆ ಆಮಿಷವೊಡ್ಡಿ ಸೆಳೆದಿರುವುದು ಈ ಆಡಿಯೋದಿಂದ ಸಾಬೀತಾಗಿದೆ ಎಂದು ಕಾಂಗ್ರೆಸ್ ಪಕ್ಷ ನಿನ್ನೆ ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಕಾಂಗ್ರೆಸ್​ನವರದ್ದು ಹುಚ್ಚುತನದ ಪರಮಾವಧಿ ಎಂದು ತರಾಟೆಗೆ ತೆಗೆದುಕೊಂಡಿದ್ಧಾರೆ.

ಶಾಸಕರು ಅವರದ್ದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮುಂದೇನು ಮಾಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ ಎಂದು ಕೋರ್ ಕಮಿಟಿ ಸಭೆಯಲ್ಲಿ ನಾನು ಹೇಳಿದ್ದೇನೆ ಅಷ್ಟೇ. ಸುಪ್ರೀಂ ಕೋರ್ಟ್​ನಲ್ಲಿ ಗೊಂದಲ ಉಂಟು ಮಾಡಲು ಕಾಂಗ್ರೆಸ್ ನಡೆಸಿರುವ ಸಂಚು ಇದು. ನ್ಯಾಯಾಲಯದಲ್ಲಿ ಇದನ್ನು ಹೇಳಿದರೆ ಛೀಮಾರಿ ಹಾಕಿಸಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ.

ರಾಜೀನಾಮೆ ಕೊಟ್ಟವರಿಗೆ ಸೀಟು ಕೊಡುತ್ತೇನೆಂದು ಹೇಳಿದ್ದಾರೆಂದು ಆರೋಪಿಸಿರುವ ಸಿದ್ದರಾಮಯ್ಯ ವಿರುದ್ಧದವೂ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯಗೆ ಕಾಮನ್​ಸೆನ್ಸ್ ಇಲ್ಲ. ಒಬ್ಬ ವಕೀಲರಾಗಿ ಹೀಗೆ ಮಾತನಾಡುವುದು ಸರಿಯಲ್ಲ. ಅವರಿಗೆ ವಾಸ್ತವಿಕ ಪ್ರಜ್ಞೆ ಇಲ್ಲ. ರಾಜೀನಾಮೆ ಕೊಟ್ಟವರಿಗೆ ಸೀಟು ಕೊಡುತ್ತೇನೆ ಎಂದು ನಾನು ಹೇಳಿಲ್ಲ. ಸಿದ್ದರಾಮಯ್ಯ ತಾನೇ ಒಬ್ಬ ದೊಡ್ಡ ಲೀಡರ್ ಎಂದಂದುಕೊಂಡು ಸುಳ್ಳು ಪ್ರಚಾರ ಮಾಡ್ತಿದ್ದಾರೆ. ನಾನು ಹೇಳಿರೋದನ್ನ ತಿರುಚಿ ಹೇಳುತ್ತಿದ್ದಾರೆ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ಸಿಗರು ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸುತ್ತಿರುವುದು ಮೂರ್ಖತನ. ಅನರ್ಹ ಶಾಸಕರಿಗೂ ಅಮಿತ್ ಶಾಗೂ ಏನು ಸಂಬಂಧ? ಸಿದ್ದರಾಮಯ್ಯ ಅವರ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸಿದ್ದರಾಮಯ್ಯಗೆ ಯಾರೂ ಕೂಡ ಗೌರವ ಕೊಡಲ್ಲ. ಅವರ ನಡೆವಳಿಕೆಯನ್ನು ಕಾಂಗ್ರೆಸ್​ನವರೇ ಇಷ್ಟಪಡಲ್ಲ ಎಂದು ಬಿಎಸ್​ವೈ ಟೀಕಿಸಿದ್ದಾರೆ.

ಜೆಎನ್ ಟಾಟಾ ಆಡಿಟೋರಿಯಮ್​ನಲ್ಲಿ ಕರ್ನಾಟಕ ವನ್ನಿಯ ಕುಲ ಕ್ಷತ್ರಿಯ ಸೇವಾ ಸಂಘ ಆಯೋಜಿಸಿದ್ದ ‘ಅಗ್ನಿ’ ಗ್ರಂಥ ಬಿಡುಗಡೆ ಕಾರ್ಯಕ್ರಮಕ್ಕೆ ಮುನ್ನ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಮದ್ಯ ನಿಷೇಧ  ಹಾಗೂ ಜೆಡಿಎಸ್ ಬೆಂಬಲ ವಿಚಾರಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ಧಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ