ಬೆಂಗಳೂರು, ನ.೩-ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನೀಡಿರುವ ಹೇಳಿಕೆಗಳು ಕಾಂಗ್ರೆಸ್-ಜೆಡಿಎಸ್ ಪಾಳಯಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಮೂಲಕ ಮತ್ತೆ ಉಪಚುನಾವಣಾ ಕಣಕ್ಕೆ ಬರುವ ಕನಸು ಕಾಣುತ್ತಿದ್ದ ಅನರ್ಹರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಕಳೆದ ಒಂದು ತಿಂಗಳಿನಿಂದ ಸುಪ್ರೀಂಕೋರ್ಟ್ ನಡೆಸುತ್ತಿರುವ ವಿಚಾರಣೆಯಿಂದ ಅನರ್ಹ ಶಾಸಕರಲ್ಲಿ ಆತ್ಮವಿಶ್ವಾಸ ಮೂಡಿಸಿತ್ತು. ಏನಿಲ್ಲವೆಂದರೂ ಕನಿಷ್ಠ ನಮಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು.
ಇತ್ತ ಬಿಜೆಪಿ ಪಾಳಯದಲ್ಲಿ ಎದುರಾಗುತ್ತಿರುವ ಅಡೆತಡೆಗಳು ಮತ್ತೊಂದೆಡೆ ಜನಸಾಮಾನ್ಯರ ನಿಂದನೆಯಿಂದಗಿ ಈಗಾಗಲೇ ಹೈರಾಣಾಗಿರುವ ಅನರ್ಹರು, ಉಪಚುನಾವಣೆ ಮುಗಿದರೆ ಸಾಕು ಎಂಬ ಪರಿಸ್ಥಿತಿಗೆ ತಲುಪಿದರು. ಈ ಹಂತದಲ್ಲಿ ಯಡಿಯೂರಪ್ಪ ಅವರು, ಅನರ್ಹರು ನಮಗಾಗಿ ರಾಜೀನಾಮೆ ನೀಡಿದ್ದಾರೆ.
ಅವರಿಂದಾಗಿಯೇ ಸರ್ಕಾರ ಬಂದಿದೆ. ಅವರ ಹಿತರಕ್ಷಣೆ ನಮ್ಮ ಜವಾಬ್ದಾರಿ ಎಂದು ಹೇಳುವ ಭರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ಷಾ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.
ಅಷ್ಟೇ ಸಾಲದು ಎಂಬಂತೆ ಆಡಿಯೋದಲ್ಲಿರುವ ಮಾತುಗಳು ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಇದು ಕಾಂಗ್ರೆಸ್-ಜೆಡಿಎಸ್ನ ಕಾನೂನು ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿದಂತಾಗಿದೆ. ಈಗಾಗಲೇ ನಡೆದಿರುವ ವಾದ-ವಿವಾದಗಳಲ್ಲಿ ಅನರ್ಹರು ರಾಜೀನಾಮೆ ನೀಡಿದ್ದು, ಕಾಂಗ್ರೆಸ್-ಜೆಡಿಎಸ್ ನಾಯಕರ ಮೇಲಿನ ಅಸಮಾಧಾನದಿಂದ ಮಾತ್ರ.ಬಿಜೆಪಿಗೂ ಅನರ್ಹರಿಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಪಾದಿಸಲಾಗಿತ್ತು.
ಶಾಸಕರು ರಾಜೀನಾಮೆ ನೀಡುವ ಅಧಿಕಾರ ಹೊಂದಿದ್ದಾರೆ. ಅದನ್ನು ನಿರ್ಬಂಧಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಅನರ್ಹ ಶಾಸಕರ ಪರ ವಕೀಲರ ವಾದವಾಗಿತ್ತು.
ಈವರೆಗೂ ಕಾಂಗ್ರೆಸ್-ಜೆಡಿಎಸ್ ಪರ ವಕೀಲರು ಮಂಡಿಸಿದ ಎಲ್ಲ ಸಾಕ್ಷ್ಯಗಳಿಗೂ ಅನರ್ಹರ ಪರ ವಕೀಲರು ಪ್ರಬಲ ವಾದ ಮಂಡನೆ ಮಾಡಿದ್ದರು. ತೀರ್ಪಿನ ಬಗ್ಗೆ ತೀವ್ರ ಕುತೂಹಲಗಳು ಎದುರಾಗಿದ್ದವು.ಈಗ ಯಡಿಯೂರಪ್ಪ ಅವರ ಆಡಿಯೋ ಪ್ರಕರಣ ನಾಳೆ ಸುಪ್ರೀಂಕೋರ್ಟ್ನಲ್ಲಿ ಪ್ರಸ್ತಾಪವಾಗಲಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪರ ವಕೀಲರು ಇದನ್ನು ಸಾಕ್ಷ್ಯವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ. ಇದರಿಂದಾಗಿ ಅನರ್ಹರ ಕಾನೂನು ಹೋರಾಟ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಕಾಂಗ್ರೆಸ್ನವರ ಹಣೆಬರಹವೇ ಇಷ್ಟು. ಮಾಡೋಕ್ಕೆ ಕೆಲಸವಿಲ್ಲದೆ ಹೇಗಾದರೂ ಮಾಡಿ ಬಿಜೆಪಿ ಮೇಲೆ ಇಲ್ಲಸಲ್ಲದ ಸುದ್ದಿ ಸೃಷ್ಟಿಸಿ ಗೊಂದಲ ಮೂಡಿಸುವುದು. ಈಗ ಅಂತಹದ್ದೇ ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಅನರ್ಹ ಶಾಸಕರ ವಿಚಾರ ಸರ್ವೋಚ್ಚ ನ್ಯಾಯಾಲಯದಲ್ಲಿರುವಾಗಲೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷವಂತೂ ಬಿಜೆಪಿ ನಾಯಕರ ಮುಖವಾಡ ಬಯಲಾಗಿದೆ. ಆಡಿಯೋವನ್ನು ಸುಪ್ರೀಂಕೋರ್ಟ್ನ ಅವಗಾಹನೆಗೆ ತಂದೇ ತರುತ್ತೇವೆ ಎಂದು ಪಟ್ಟು ಹಿಡಿದಿದೆ.
ನ್ಯಾಯಾಲಯ ಇದನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಿದೆ ಎಂಬುದು ನಾಳೆ ತಿಳಿಯಲಿದೆ.