ಹೈದರಾಬಾದ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಹೂಡಿರುವ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಟಿಆರ್ಡಿಸಿ)ಯ ನೌಕರರಿಗೆ ಸಿಎಂ ಕೆ. ಚಂದ್ರಶೇಖರ್ ರಾವ್ ಡೆಡ್ಲೈನ್ ನೀಡಿದ್ದಾರೆ. ನವೆಂಬರ್ 5ನೇ ತಾರೀಕಿನೊಳಗೆ ಮುಷ್ಕರ ನಿಲ್ಲಿಸಿ ಕೆಲಸಕ್ಕೆ ವಾಪಸ್ಸಾಗುವಂತೆ ಮುಷ್ಕರ ನಿರತ ನೌಕರರಿಗೆ ಸಿಎಂ ಕೆಸಿಆರ್ ಖಡಕ್ ಸೂಚನೆ ನೀಡಿದ್ದಾರೆ.
ಇಂದು ತೆಲಂಗಾಣ ಸಚಿವ ಸಂಪುಟದಲ್ಲಿ ಹಲವು ಮಹತ್ವದ ವಿಚಾರಗಳು ಚರ್ಚಿಸಿದ ಬಳಿಕ ಸಿಎಂ ಕೆಸಿಆರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮುಷ್ಕರ ಹೂಡಿರುವ ನೌಕಕರಿಗೆ ಕೊನೆಯ ಅವಕಾಶ ನೀಡುತ್ತಿದ್ದೇನೆ. ಯಾರ ಉದ್ಯೋಗವೂ ಕಸಿದುಕೊಂಡು ತಮ್ಮ ಹೊಟ್ಟೆ ಮೇಲೆ ಹೊಡೆಯುವ ಉದ್ದೇಶ ಸರ್ಕಾರಕ್ಕಿಲ್ಲ. ಹಾಗಾಗಿ ಮುಂದಿನ ನವೆಂಬರ್ 5ನೇ ತಾರೀಕಿನೊಳಗೆ ನಿಮ್ಮ ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗಬೇಕು ಎಂದಿದ್ದಾರೆ.
ಯಾವುದೇ ಸಂಘ-ಸಂಸ್ಥೆಗಳ ಮಾಯೆಯೊಳಗೆ ಬಿದ್ದು ನಿಮ್ಮ ಜೀವನಕ್ಕೆ ಕುತ್ತು ತಂದುಕೊಳ್ಳಬೇಡಿ. ಸರ್ಕಾರ ನೀಡಿರುವ ಕೊನೆಯ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ನೀವು ನನ್ನ ಮಕ್ಕಳಿದ್ದಂತೆ, ನಿಮ್ಮ ಭವಿಷ್ಯವನ್ನು ಹಾಳುವ ಮಾಡುವ ಯಾವುದೇ ಉದ್ದೇಶ ನನಗಿಲ್ಲ. ಅಲ್ಲದೇ ಟಿಎಸ್ಆರ್ಟಿಸಿ ಸರ್ಕಾರದ ಜತೆಗೆ ವಿಲೀನ ಮಾಡಲು ಸಾಧ್ಯವಿಲ್ಲ. ಹಾಗೇ ಮಾಡಿದೆ ಟಿಎಸ್ಆರ್ಟಿಸಿ ಮೇಲೆ ಸಾಕಷ್ಟು ಕೆಟ್ಟ ಪರಿಣಾಮಗಳು ಬೀರುತ್ತವೆ. ಜತೆಗೆ ರಾಜ್ಯದ 97ಕ್ಕೂ ಹೆಚ್ಚು ನಿಗಮ ಮಂಡಳಿಗಳಿಂದ ಇಥದ್ದೇ ಬೇಡಿಕೆ ಬರುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಶನಿವಾರ(ಅ.26) ಸಿಎಂ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರ, ಟಿಎಸ್ಆರ್ಟಿಸಿ ಸಾರಿಗೆ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ನಾಯಕರೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದೆ. ಹಾಗಾಗಿಯೇ ನೌಕರರು ಸತತ 30ನೇ ದಿನವೂ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಸಿದ್ದಾರೆ.
ಈ ಹಿಂದೆಯೇ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಟಿಆರ್ಡಿಸಿ ನೌಕರರು ಅ.19ರಂದು ತೆಲಂಗಾಣ ಬಂದ್ ಆಚರಿಸಿದ್ದರು. ಸತತ 14 ದಿನಗಳ ಅನಿರ್ದಿಷ್ಟಾವಧಿ ಮುಷ್ಕರದ ಬಳಿಕ ಟಿಎಸ್ಆರ್ಟಿಸಿ ಸಾರಿಗೆ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ಟಿಆರ್ಎಸ್ ಸರ್ಕಾರದ ವಿರುದ್ಧ ನೀಡಿದ್ದ ತೆಲಂಗಾಣ ಬಂದ್ ಕರೆಗೆ ಓಗೊಟ್ಟು ಕಾಂಗ್ರೆಸ್, ಟಿಡಿಪಿ, ಬಿಜೆಪಿ ಸೇರಿದಂತೆ ಎಡ ಪಕ್ಷಗಳು ಬೀದಿಗಿಳಿದಿದ್ದವು. ಸಿಎಂ ಕೆ. ಚಂದ್ರಶೇಖರ್ ರಾವ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧಧ ಈ ಬಂದ್ ತೀವ್ರಸ್ವರೂಪ ಪಡೆದುಕೊಂಡಿತ್ತು. ಮುಷ್ಕರ ಪ್ರತಿಭಟನೆಗೆ ಇಬ್ಬರು ಸಾರಿಗೆ ನೌಕರರು ಬಲಿಯಾಗಿದ್ದರು. ಬಂದ್ ಆಚರಣೆ ವೇಳೆ ತೆಲಂಗಾಣ ಪೊಲೀಸರು ರಾಜ್ಯಾದ್ಯಂತ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು.
ಅಕ್ಟೋಬರ್ 5ನೇ ತಾರೀಕಿನಂದೇ ಮುಷ್ಕರ ಆರಂಭಿಸಿದ ಕಾರ್ಮಿಕರು ಸುಮಾರು 26 ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಚಂದ್ರಶೇಖರ್ ರಾವ್ ಸರ್ಕಾರಕ್ಕೆ ಪಟ್ಟು ಹಿಡಿದಿದ್ದರು. ತೆಲಂಗಾಣ ರಸ್ತೆ ಸಾರಿಗೆ ನೌಕರರ ಸಂಘದ ಜಂಟಿ ಕ್ರಿಯಾ ಸಮಿತಿ ಆಯೋಜಿಸಿದ್ದ ಸರ್ಕಾರದ ವಿರುದ್ಧದ ಮುಷ್ಕರದಲ್ಲಿ 49,340 ನೌಕರರಿಗೂ ಹೆಚ್ಚು ಮಂದಿ ಭಾಗವಹಿಸಿದ್ದರು. ಈ ಪೈಕಿ ಬರೋಬ್ಬರಿ 48,000 ನೌಕರರನ್ನು ಸೇವೆಯಿಂದ ವಜಾಗೊಳಿಸಿ ಸಿಎಂ ಕೆಸಿಆರ್ ಆದೇಶ ಹೊರಡಿಸಿದ್ದರು. ಇದರ ಬಳಿಕ ಪ್ರತಿಭಟನೆಯೂ ಮತ್ತಷ್ಟು ತೀವ್ರಗೊಂಡಿತ್ತು. ಈ ಮಧ್ಯೆ ವಜಾಗೊಳಿಸಿದವರ ಜಾಗಕ್ಕೆ ಹೊಸ ನೌಕಕರನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಸಿಎಂ ನೀಡಿದ ಹೇಳಿಕೆ ಇನ್ನಷ್ಟೂ ಕಿಡಿ ಹೊತ್ತಿಸಿತ್ತು.
ಸಿಎಂ ಚಂದ್ರಶೇಖರ್ ರಾವ್ ಸರ್ಕಾರದ ವಿರುದ್ಧ ವಜಾಗೊಂಡ ನೌಕಕರರೀಗ ಪ್ರತಿಭಟನೆ ಮೂಲಕ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಈಗಾಗಲೇ ಕಳೆದ ಶನಿವಾರ ಪ್ರತಿಭಟನೆ ವೇಳೆ ಟಿಎಸ್ಆರ್ಟಿಸಿ ಬಸ್ ಚಾಲಕ ಶ್ರೀನಿವಾಸ್ ರೆಡ್ಡಿ ಎಂಬುವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಬಲಿಯಾಗಿದ್ದಾರೆ.
ಶ್ರೀನಿವಾಸ್ ರೆಡ್ಡಿ ಬೆನ್ನಲ್ಲೇ ಸುರೇಂದ್ರ ಗೌಡ (36) ಎಂಬುವರು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡದ್ದರು. ಅಂತೆಯೇ ಮತ್ತೋರ್ವ ಚಾಲಕ ವೆಂಕಟೇಶ್ವರ ಚಾರಿ ಎಂಬಾತ ಕೂಡಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ, ತಕ್ಷಣವೇ ಮುಷ್ಕರ ನಿರತ ನೌಕರರು ಅವರನ್ನು ರಕ್ಷಿಸಿದ್ದರು.
ಇಷ್ಟಾದರೂ ಸಾರಿಗೆ ನೌಕರರ ಜತೆ ಮಾತುಕತೆಗೆ ಮುಂದಾಗದ ಸಿಎಂ ಕೆಸಿಆರ್ ಸರ್ಕಾರ, ಬಂದ್ ಆಚರಣೆ ದಿನದವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ದಿಢೀರ್ 48 ಸಾವಿರ ಸಾರಿಗೆ ನೌಕರರ ವಜಾಗೊಳಿಸಿದ ನಂತರ ತೆಲಂಗಾಣದ ಬಹುತೇಕ ಸರ್ಕಾರಿ ಬಸ್ಗಳು ಸ್ಥಗಿತಗೊಂಡಿದ್ದವು. ಹಾಗಾಗಿ ಶಾಲಾ-ಕಾಲೇಜುಗಳಿಗೆ ಅಜೆ ನೀಡಲಾಗಿದೆ ಎಂದು ಸಿಎಂ ಸಮಜಾಯಿಷಿ ನೀಡಿದ್ದರು.
ತೆಲಂಗಾಣ ಹೈಕೋರ್ಟ್ ಮುಷ್ಕರ ನಿರತ ಕಾರ್ಮಿಕರೊಂದಿಗೆ ಮಾತುಕತೆ ನಡೆಸುವಂತೆ ಆದೇಶಿಸಿದೆ. ಆದರೂ, ಸಿಎಂ ಕೆಸಿಆರ್ ತಮ್ಮ ಹಠ ಮುಂದುವರೆಸಿದ್ದಾರೆ. ಬೀದಿಗಿಳಿದ ನೌಕರರ ಬೆನ್ನಿಗೆ ಕಾಂಗ್ರೆಸ್, ಬಿಜೆಪಿ, ಟಿಡಿಪಿ, ಜನಸೇನ, ಎಡಪಕ್ಷದ ಕಾರ್ಯಕಾರ್ತರು ನಿಂತಿದ್ದಾರೆ.