ಪ್ರವಾಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ-ಸಚಿವ ಜಗದೀಶ್ ಶೆಟ್ಟರ್ ವಿದೇಶಿ ಪ್ರವಾಸ ರದ್ದು

ಬೆಂಗಳೂರು, ನ.1- ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ವಿದೇಶಿ ಪ್ರವಾಸವನ್ನು ರದ್ದು ಮಾಡಿದ್ದಾರೆ.

ಇದೇ 6ರಿಂದ 17ರವರೆಗೆ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಬಂಡವಾಳ ಹೂಡುವ ಸಂಬಂಧ ಜಗದೀಶ್ ಶೆಟ್ಟರ್ ಚೀನಾ, ಇಂಗ್ಲೆಂಡ್‍ಗೆ ಹೊರಡಲು ಸಜ್ಜಾಗಿದ್ದರು.

ಶೆಟ್ಟರ್ ಜತೆ ಅವರ ಪತ್ನಿ ಶಿಲ್ಪಾ ಶೆಟ್ಟರ್, ವಾಣಿಜ್ಯ ಮತ್ತು ಕೈಗಾರಿಕೆ  ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‍ಗುಪ್ತ, ಅವರ ಪತ್ನಿ ವೀಣಾ ಗುಪ್ತ, ಶೆಟ್ಟರ್ ಆಪ್ತ ಕಾರ್ಯದರ್ಶಿ ದವಳೇಶ್ವರ್, ಎಂಎಸ್‍ಐಎಲ್ ಎಂಡಿ ಪ್ರಕಾಶ್ ಹಾಗೂ ಅವರ ಪತ್ನಿ, ಎಂಎಸ್‍ಐಎಲ್ ಅಧಿಕಾರಿ ಚಂದ್ರಪ್ಪ ಹಾಗೂ ಅವರ ಪತ್ನಿ ವಿದೇಶಕ್ಕೆ ಹೊರಟಿದ್ದರು.

ಒಟ್ಟು ಹತ್ತು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದ ಶೆಟ್ಟರ್, ಕರ್ನಾಟಕದಲ್ಲಿ ಬಂಡವಾಳ ಹೂಡುವ ಸಂಬಂಧ ಕೆಲವು ಉದ್ಯಮಿಗಳನ್ನು ಭೇಟಿ ಮಾಡಲಿದ್ದರು.ಆದರೆ, ಅವರ ಪ್ರವಾಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಪ್ರವಾಹ  ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿರುವಾಗ  ವಿದೇಶಿ ಪ್ರವಾಸ ಕೈಗೊಳ್ಳುವ ಅಗತ್ಯವಾದರೂ ಏನಿತ್ತೆಂದು ಪ್ರಶ್ನಿಸಿದ್ದರು.

ಎರಡು ಜಿಲ್ಲೆಗಳ ಉಸ್ತುವಾರಿ ಸಚಿವರಾಗಿರುವ ಶೆಟ್ಟರ್, ಪ್ರವಾಹ ಇಳಿಮುಖವಾದ ನಂತರ ವಿದೇಶಿ ಪ್ರವಾಸ ಕೈಗೊಳ್ಳಬಹುದಿತ್ತು.ಈಗ ಯಾವ ಕಾರಣಕ್ಕಾಗಿ ಇಷ್ಟು ಆತುರದಲ್ಲಿ ವಿದೇಶಿ ಪ್ರವಾಸ ಮಾಡುವ ಅಗತ್ಯವಾದರೂ ಏನಿತ್ತು ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದರು.ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಶೆಟ್ಟರ್ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ರೋಮ್ ಹೊತ್ತಿ ಉರಿಯುವಾಗ ದೊರೆ ನೀರೋ ಪಿಟೀಲು ಕುಯ್ಯುತ್ತಿದ್ದ ಎಂಬಂತೆ, ರಾಜ್ಯದಲ್ಲಿ ನೆರೆಯಿಂದ ಮನೆ ಮಠ ಕಳೆದುಕೊಂಡು ಸಾರ್ವಜನಿಕರು ಸಂಷ್ಟದಲ್ಲಿರುವಾಗ ಶೆಟ್ಟರ್ ವಿದೇಶಿ ಪ್ರವಾಸ ಕೈಗೊಳ್ಳುವ ಅಗತ್ಯವಿರಲಿಲ್ಲ ಎಂದು ಅನೇಕರು ಅಸಮಾಧಾನ ಹೊರ ಹಾಕಿದ್ದರು.ಈ ಹಿನ್ನೆಲೆಯಲ್ಲಿ ಅವರು ತಮ್ಮ ಬಹುನಿರೀಕ್ಷಿತ ವಿದೇಶಿ ಪ್ರವಾಸವನ್ನು ರದ್ದು ಮಾಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ