ಪರಭಾಷಿಗರು ಕೂಡ ಕನ್ನಡ ಕಲಿಯಬೇಕು-ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ನ.1- ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿತು ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೆ ಕನ್ನಡ ಭಾಷೆ ಕಲಿಯುವಂತಹ ವಾತಾವರಣವನ್ನು ನಿರ್ಮಾಣ ಮಾಡಿ ಕನ್ನಡತನವನ್ನು ಉಳಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನತೆಗೆ ಕರೆ ಕೊಟ್ಟರು.

ರಾಜ್ಯದಲ್ಲಿ ನೆಲೆ ನಿಂತಿರುವ ಪರಭಾಷಿಗರು ಕೂಡ ಕನ್ನಡ ಕಲಿಯಬೇಕು. ಕಲಿಯಲು ಸಮ್ಮತಿಸದವರಿಗೆ ಮನವೊಲಿಸುವ ಮೂಲಕ ಕನ್ನಡ ಕಲಿಸಿ.ಅದಕ್ಕೂ ಮೊದಲು ನಮ್ಮ ನಮ್ಮ ಮನೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಕಲಿಯಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 64ನೇ ಕನ್ನಡ ರಾಜ್ಯೋತ್ಸವದಲ್ಲಿ ನಾಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಜನ್ಮ ಕೊಟ್ಟ ತಾಯಿ, ತಾಯಿ ನಾಡು ಎಷ್ಟು ಮುಖ್ಯವೋ ಅದೇ ರೀತಿ ತಾಯಿ ನುಡಿಯು ಅಷ್ಟೇ ಮುಖ್ಯ ಎಂಬುದನ್ನು ಮನಗಂಡಾಗ ಕನ್ನಡ ಉಳಿಯಲು ಸಾಧ್ಯ ಎಂದು ಕಿವಿಮಾತು ಹೇಳಿದರು.

À. ಈ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿಗೆ ಒಳಗಾಗುವುದಿಲ್ಲ. ಅಭಿವೃದ್ಧಿ ವಿಷಯದಲ್ಲಿ ನಾಡಿನ ಹಿರಿಯರು, ಬುದ್ದಿ ಜೀವಿಗಳು ಹಾಗೂ ತಜ್ಞರ ಮಾರ್ಗದರ್ಶ, ಸಹಕಾರ ಪಡೆದು ಸರ್ಕಾರ ಪಡೆಯುತ್ತಿದೆ. ಕರ್ನಾಟಕದಲ್ಲಿ ನೆಲೆಗೊಂಡಿರುವವರಿಗೆ ಇಲ್ಲಿನ ಭಾಷೆ, ಸಂಸ್ಕøತಿ, ಆಚಾರ, ವಿಚಾರ ತಿಳಿ ಹೇಳುವ ಕೆಲಸವನ್ನು ಮಾಡಬೇಕು.ಕನ್ನಡ ತನವನ್ನು ಗೌರವಿಸುವುದಲ್ಲೆ ನಮ್ಮ ತನವನ್ನು ಉಳಿಸಿಕೊಳ್ಳಿ ಎಂದು ಸಿಎಂ ಕರೆ ಕೊಟ್ಟರು.

ಕನ್ನಡಿಗರು ಎಲ್ಲೇ ಇದ್ದರೂ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುತ್ತಾರೆ.ನಮ್ಮ ಸಂಸ್ಕøತಿಯನ್ನು ರಕ್ಷಣೆ ಮಾಡುವುದರ ಜತೆಗೆ ಬೇರೆಯವರ ಸಂಸ್ಕøತಿಯನ್ನು ಅನುಕರಣೆ ಮಾಡುತ್ತಾರೆ.ಇದು ಕನ್ನಡಿಗರಲ್ಲಿ ಮಾತ್ರ ಕಾಣಲು ಸಾಧ್ಯ. ಕನ್ನಡಿಗರ ಔದಾರ್ಯವೇ ಅಂತಹದ್ದು, ಇದು  ಇತರರಿಗೂ ಮಾದರಿಯಾಗಲಿ ಎಂದು ಆಶಿಸಿದರು.

ಕಲಿಕೆಯ ಗುಣಮಟ್ಟವನು ಸುಧಾರಿಸಲು ನಮ್ಮ ಸರ್ಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಉಚಿತ ಪಠ್ಯಪುಸ್ತಕ, ಬೈಸಿಕಲ್ ವಿತರಣೆ, ಮಧ್ಯಾಹ್ನದ ಬಿಸಿಯೂಟು, ಕ್ಷೀರಭಾಗ್ಯ, ಸಮವಸ್ತ್ರ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ವಾಣಿಜ್ಯ ಮತ್ತು ವ್ಯವಹಾರಗಳಲ್ಲಿ ಕನ್ನಡವನ್ನು ಹೆಚ್ಚು ಬಳಸಬೇಕೆಂದು ಸಿಎಂ ಮನವಿ ಮಾಡಿದರು.

ಕನ್ನಡಕ್ಕಾಗಿ ಕೈ ಎತ್ತಿ, ನಿಮ್ಮ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕವಿವಾಣಿಯನ್ನು ಉಲ್ಲೇಖಿಸಿದ ಯಡಿಯೂರಪ್ಪ,  ಹಾದಿ ಕವಿ ಪಂಪನಿಂದ ಹಿಡಿದು ಕುವೆಂಪುರವರ ವರೆಗೆ, ಹರಿಹರರಿಂದ ಹಿಡಿದು ಬಸವಣ್ಣನವರ ನವರೆಗೆ ಪ್ರಾಚೀನ ,ಮಧ್ಯಯುಗ, ಆಧುನಿಕ, ನವಯುಗ, ನವೋದಯ, ನವ್ಯ, ಬಂಡಾಯ, ದಲಿತ ಸಾಹಿತ್ಯಗಳಲ್ಲಿ ಕನ್ನಡ ಭಾಷೆ ಉತ್ಕøಷ್ಟವಾಗಿ ಬೆಳೆದಿದೆ. ಇದಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿರುವುದೇ ಸಾಕ್ಷಿ ಎಂದು ಪ್ರಶಂಸಿಸಿದರು.

ಕರ್ನಾಟದಲ್ಲಿ ವಿಫಲವಾದ ನೈಸರ್ಗಿಕ ಸಂಪತ್ತು, ಅರಣ್ಯ ಪ್ರದೇಶ, ಹಸಿರು ವನ ರಾಶಿ, ಬೆಟ್ಟಗುಡ್ಡ, ಸಮುದ್ರ ತಟ ಸೇರಿದಂತೆ ಎಲ್ಲಾ ರೀತಿಯ ಅವಕಾಶಗಳಿವೆ. ನಾಡಿನ ಏಳ್ಗೆಗಾಗಿ ನಿರಂತರ ದುಡಿಯುವ ಮಾನವ ಸಂಪನ್ಮೂಲವಿದೆ.64ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ಕನ್ನಡಕ್ಕಾಗಿ ಕನ್ನಡವನ್ನು ಉಸಿರಾಗಿಸಿಕೊಂಡು ನಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಮಾತನಾಡಿ, ರಾಜ್ಯೋತ್ಸವ ಸಂದರ್ಭದಲ್ಲಿ ಕೆಲವು ಕಡೆ ನಾಡ ಧ್ವಜದ ಬದಲಿಗೆ ರಾಷ್ಟ್ರಧ್ವಜ ಹಾರಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ ಎಂಬ ಗೊಂದಲ ಸೃಷ್ಟಿಯಾಗಿದೆ.ಪ್ರತಿ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರ ಧ್ವಜದ ಜತೆಗೆ ನಾಡ ಧ್ವಜವನ್ನು ಹಾರಿಸುವುದು ಸಂಪ್ರದಾಯ.ರಾಷ್ಟ್ರ ಧ್ವಜಕ್ಕೆ ಎಲ್ಲಿಯೂ ಅಪಮಾನವಾಗದಂತೆ ನಮ್ಮ ಧ್ವಜವನ್ನೂ ಹಾರಿಸಿಕೊಂಡು ಬರುತ್ತಿದ್ದೇವೆ. ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದರು.

ನೆಲ, ಜಲ, ಭಾಷೆ, ಸಂಸ್ಕøತಿ ಕಾಪಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ದವಾಗಿದೆ.ಕನ್ನಡ ತನವನ್ನು ಉಳಿಸಿಕೊಂಡು ಹೋಗುವು ನಮ್ಮ ಆದ್ಯತೆ ಯಾಗಿದೆ. ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಮಕ್ಕಳಿಗೆ ಬಾಕಿ ಉಳಿಸಿಕೊಂಡಿದ್ದ ಎರಡು ಜತೆ ಸಮವಸ್ತ್ರ ವಿತರಣೆ, ಅನುದಾನ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಸುವುದು ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಯಾವ ಸಂದರ್ಭದಲ್ಲೂ ಕನ್ನಡಕ್ಕೆ ಧಕ್ಕೆಯಾಗುವಂತಹ ತೀರ್ಮಾನವನ್ನು ನಮ್ಮ ಸರ್ಕಾರ ಕೈಗೊಳ್ಳುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೇಯರ್ ಗೌತಮ್‍ಕುಮಾರ್ ಜೈನ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಅ.ದೇವೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ಜಿ.ಜಗದೀಶ್, ಪ್ರಾಥಮಿ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಎಂ.ಕನಗವಲ್ಲಿ, ಸಮಗ್ರ ಶಿಕ್ಷಣದ ಯೋಜನಾ ನಿರ್ದೇಶಕರಾದ ಡಾ.ಎಂ.ಟಿ.ರೇಜು ಸೇರಿದಂತೆ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ