ಬೆಂಗಳೂರು, ನ.1-ದಾಸ್ಯದ ಪ್ರತೀಕವಾಗಿದ್ದ ಹೈದರಾಬಾದ್ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿದಿರುವ ರಾಜ್ಯ ಸರ್ಕಾರವು ನಾಡಗೀತೆಗೆ ಗೌರವ ತಂದು ಕೊಡಲು ಮುಂದಾಗಲಿ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.
ಕನ್ನಡ ಗೆಳೆಯರ ಬಳಗ ನಡೆಸಿದ ಕನ್ನಡ ಚಿಂತನ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ರಚಿತ ಜಯ ಭಾರತ ಜನನಿಯ ತನುಜಾತೆ ಗೀತೆಯನ್ನು ನಾಡಗೀತೆಯಾಗಿ ಘೋಷಿಸಿ ದಶಕಗಳು ಕಳೆದಿವೆ. ಆದರೆ, ಹಾಡುವ ಕ್ರಮ, ನಿರ್ದಿಷ್ಟ ಕಾಲಾವಧಿ ಮತ್ತು ಧಾಟಿಯನ್ನು ನಿಗದಿಪಡಿಸಿರುವುದರಿಂದ ಒಬ್ಬೊಬ್ಬರು ಒಂದೊಂದು ರೀತಿ ಹಾಡುತ್ತಾರೆ. ನಾಡಗೀತೆಗೆ ಆಗುತ್ತಿರುವ ಈ ಅಪಚಾರವನ್ನು ತಡೆಯಲು ರಾಷ್ಟ್ರಗೀತೆ ಜನಗಣಮನದ ಮಾದರಿಯಲ್ಲಿ ನಿರ್ದಿಷ್ಟ ಕಾಲಾವಧಿ ಮತ್ತು ಧಾಟಿಯನ್ನು ನಿಗದಿಪಡಿಸಿ, ನಾಡಗೀತೆಯನ್ನು ಹಾಡುವ ನಿಯಮವನ್ನು ರೂಪಿಸಿ ಎಲ್ಲ ಸಾರ್ವಜನಿಕ ಕಾರ್ಯಕ್ರಮ, ಶಾಲೆ, ಕಾಲೇಜುಗಳಲ್ಲಿ ಕಡ್ಡಾಯಗೊಳಿಸಬೇಕು ಎಂದರು.
ಅನಕೃ, ಮ.ರಾಮಮೂರ್ತಿ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ:
ಬೆಂಗಳೂರು ನಗರವು ಪರಭಾಷಿಕರ ತಾಣವಾಗುತ್ತಿದೆ. ಹೊರಗಿನಿಂದ ಬಂದವರು ಇಲ್ಲಿಯೇ ತಳವೂರುತ್ತಿದ್ದಾರೆ. ಜೊತೆಗೆ ಸಣ್ಣಪುಟ್ಟ ಕೆಲಸಗಳಿಗೂ ತಮ್ಮವರನ್ನೇ ಕರೆತರುತ್ತಿದ್ದಾರೆ. ಇಲ್ಲಿಯ ಸಂಪತ್ತನ್ನು ಬಳಸಿಕೊಂಡು ಸೊಂಪಾಗಿ ಬೆಳೆದು, ಅವರ ಭಾಷೆ-ಸಂಸ್ಕøತಿಯನ್ನು ಬೆಳೆಸುತ್ತಾ ಕನ್ನಡ ಭಾಷೆ-ಸಂಸ್ಕøತಿಗೆ ಕುತ್ತಾಗಿದ್ದಾರೆ ಎಂದು ರಂಗವಿಮರ್ಶಕ, ಕನ್ನಡ ಪ್ರಾಧ್ಯಾಪಕ ಡಾ.ರುದ್ರೇಶ್ ಅದರಂಗಿ ವಿಷಾದ ವ್ಯಕ್ತಪಡಿಸಿದರು.
ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಕನ್ನಡ ಭಾಷೆ ಮತ್ತು ಸಂಸ್ಕøತಿಗಳಿಗೆ ವಿಪತ್ತು ಖಂಡಿತ. ಕನ್ನಡ ಭಾಷೆ ಮತ್ತು ಸಂಸ್ಕøತಿ ಅನ್ಯರಿಂದ ಉಳಿಯುವುದಿಲ್ಲ. ಕನ್ನಡಿಗರು ಜಾತಿ, ವರ್ಗ ಭೇದವನ್ನು ಬಿಟ್ಟು ಒಗ್ಗೂಡದಿದ್ದರೆ ಕನ್ನಡವನ್ನಷ್ಟೇ ಅಲ್ಲದೆ, ಮನೆ, ಬಡಾವಣೆ, ಬೆಂಗಳೂರು ನಗರವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕನ್ನಡ ಚಳವಳಿಗಾರರನ್ನು ಕುರಿತು ನಮ್ಮವರೇ ಉಪೇಕ್ಷೆಯ, ಅಪಹಾಸ್ಯದ ಮಾತನಾಡುತ್ತಿದ್ದಾರೆ.ಇದು ಸರಿಯಲ್ಲ. ಇಂದು ರಾಜಧಾನಿಯಲ್ಲಿ ಕನ್ನಡ ಈ ಮಟ್ಟಿಗೆ ಉಳಿದಿದೆಯೆಂದರೆ ಅದಕ್ಕೆ ಕನ್ನಡ ಹೋರಾಟಗಾರರೇ ಕಾರಣ.ಕರ್ನಾಟಕ ಸರ್ಕಾರವು ಕನ್ನಡನಾಡು-ನುಡಿಗೆ ದುಡಿದ, ಚಳವಳಿಯ ಮೂಲಕ ಕನ್ನಡ ಭಾಷೆ ಸಂಸ್ಕøತಿಗಳ ಉಳಿವಿಗೆ ಶ್ರಮಿಸಿದವರಿಗೆ ಪ್ರತಿವರ್ಷ ಅನಕೃ, ಮ.ರಾಮಮೂರ್ತಿ ಪ್ರಶಸ್ತಿಯನ್ನು ಸ್ಥಾಪಿಸಿ, ಕನ್ನಡ ಚಳವಳಿಗಾರರಿಗೆ ಪ್ರಶಸ್ತಿಯನ್ನು ನೀಡುವುದರ ಮೂಲಕ ಗೌರವಿಸಲಿ ಎಂದರು.
ರಾ.ನಂ.ಚಂದ್ರಶೇಖರ ಬಳಗದ ಚಟುವಟಿಕೆಗಳನ್ನು ವಿವರಿಸಿ, ಸರ್ಕಾರವು ಪರಿಷ್ಕøತ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಿ, ಕನ್ನಡಿಗರೇ ಕೆಲಸ ಅನ್ನುವ ಕೂಗಿಗೆ ಕಾನೂನು ಬಲ ತಂದು ಕೊಡಬೇಕು ಮತ್ತು ಕೇಂದ್ರ ಸರ್ಕಾರವು ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರಿಚ್ಛೇದ 8ರಲ್ಲಿರುವ 22 ಭಾಷೆಗಳಲ್ಲೂ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದರು.
ಬಾ.ಹ.ಉಪೇಂದ್ರ, ಮ.ಚಂದ್ರಶೇಖರ, ಪೆÇ್ರ.ತೀ.ನಾಗಭೂಷಣ, ಎಚ್.ಎನ್.ರಮೇಶ್ಬಾಬು, ಕಾರ್ಮಿಕ ಲೋಕದ ಬಿ.ವಿ.ರವಿಕುಮಾರ್, ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ಆರ್.ರಾಮಸ್ವಾಮಿ, ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಮ.ಚಂದ್ರಶೇಖರ್ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಡಾ.ಎಂ.ಚಿದಾನಂದಮೂರ್ತಿ ಕನ್ನಡ ಸಂಸ್ಕøತಿಯ ಹಿರಿಮೆ ಗರಿಮೆ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು.