ನಾಡು, ನುಡಿ ರಕ್ಷಣೆಯ ವಿಚಾರದಲ್ಲಿ ಒಟ್ಟಾಗಿ ಕೆಲಸ ಮಾಡೋಣ-ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ನ.1-ಜಾತಿ, ಧರ್ಮ, ಮತ ಎಲ್ಲವನ್ನೂ ಬಿಟ್ಟು ನಾಡು,ನುಡಿ ರಕ್ಷಣೆಯ ವಿಚಾರದಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕರೆ ಕೊಟ್ಟರು.

ಗಾಂಧಿನಗರ ಕರ್ನಾಟಕ ರಕ್ಷಣಾ ವೇದಿಕೆಯ ಕೇಂದ್ರ ಕಚೇರಿ ಮುಂದೆ ಹಮ್ಮಿಕೊಂಡಿದ್ದ 64ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಡಧ್ವಜವನ್ನು ಕರ್ನಾಟಕದ ಜನರು ಕೊಟ್ಟಿದ್ದಾರೆ. ನನ್ನ ಪ್ರಾಣ ಇರುವವರೆಗೂ ಈ ಧ್ವಜದ ಜೊತೆಯಾಗಿ ಇರುತ್ತೇನೆ ಎಂದು ಹೇಳಿದರು.

ನನ್ನ ವ್ಯವಹಾರದಲ್ಲಿ ತಪ್ಪು ಮಾಡಿದ್ದರೆ ಯಾವ ಶಿಕ್ಷೆ ಬೇಕಾದರೂ ಬಿಜೆಪಿಯವರು ನೀಡಲಿ ಎಂದ ಅವರು, ತಾಯಿ ಭುವನೇಶ್ವರಿ ಜನರ ಋಣ ತೀರಿಸುವ ಶಕ್ತಿ ಕೊಡಲಿ ಎಂದರು.

ತಾವು ಕಷ್ಟ ಕಾಲದಲ್ಲಿ ಇದ್ದಾಗ ನನ್ನ ಮೇಲೆ ನಂಬಿಕೆ, ವಿಶ್ವಾಸವಿಟ್ಟು ನಡೆಸಿದ ಪ್ರತಿಭಟನಾ ಮೆರವಣಿಗೆ ಇತಿಹಾಸ ಪುಟ ಸೇರಿದೆ. ತಿಹಾರ್ ಜೈಲಿನಿಂದ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಗೆ ಬರಬೇಕೆಂದು ಭಾವಿಸಿದ್ದೆ. ಅದು ಇಂದು ಈಡೇರಿದೆ. ಸರಿ-ತಪ್ಪುಗಳನ್ನು ಜನರಿಗೆ ಬಿಡುತ್ತೇನೆ. ನಮಗೆ ಯಾರು ಉಪಕಾರ ಮಾಡುತ್ತಾರೋ, ಯಾರು ನೆರಳು ಕೊಡುತ್ತಾರೋ, ಆಶ್ರಯ ಕೊಡುತ್ತಾರೋ ಅವರನ್ನು ಮರೆಯಬಾರದು.ಹೀಗಾಗಿ ನನ್ನ ಮೇಲೆ ನಂಬಿಕೆ ಇಟ್ಟು ಪ್ರೀತಿ-ವಿಶ್ವಾಸ ತೋರಿದ್ದಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಹೇಳಿದರು.

ಕರವೇ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ಎರಡು ದಶಕಗಳ ಕಾಲ ಮುನ್ನಡೆಯುತ್ತಿರುವುದು ಸುಲಭದ ಕೆಲಸವಲ್ಲ. ಕನ್ನಡ ಹೋರಾಟಗಾರರ ಮೇಲೆ ಹೂಡಲಾಗಿರುವ ಕೇಸುಗಳನ್ನು ವಜಾ ಮಾಡುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ರಾಜ್ಯ ಸರ್ಕಾರ ಕನ್ನಡದ ಬಾವುಟವನ್ನು ಹಾರಿಸಬಾರದು ಎಂಬ ನಿಲುವು ತಳೆದಿರುವುದನ್ನು ಖಂಡಿಸುತ್ತೇವೆ. ಇದು ಭಾವನಾತ್ಮಕ ವಿಷಯವಾಗಿದ್ದು, ಸರ್ಕಾರ ಕೆರಳಿಸುವ ಕೆಲಸ  ಮಾಡಬಾರದು. ರಾಷ್ಟ್ರ ಧ್ವಜದ ಬಗ್ಗೆ ನಮಗೆ ಗೌರವವಿದೆ. ಹಾಗೆಯೇ ಕನ್ನಡ ಧ್ವಜಾರೋಹಣಕ್ಕೂ ಅವಕಾಶ ದೊರೆಯಬೇಕು ಎಂದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ರಕ್ಷಣಾ ವೇದಿಕೆ ಜೊತೆಯಲ್ಲಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ