ಬೆಂಗಳೂರು, ನ.1- ನೂರು ದಿನ ಪೂರೈಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪರೀಕ್ಷೆಗಳಲ್ಲಿ ಉತ್ತರಗಳನ್ನೇ ಬರೆದಿಲ್ಲ. ಹೀಗಾಗಿ ಅವರಿಗೆ ಯಾವುದೇ ಅಂಕ ನೀಡುವ ಅಗತ್ಯ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರೆಸ್ಕ್ಲಬ್ನಲ್ಲಿಂದು ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಸರ್ಕಾರ ಸಂಪೂರ್ಣ ಆಡಳಿತಾತ್ಮಕ ವೈಫಲ್ಯ ಅನುಭವಿಸಿದೆ.ಅಧಿಕಾರಿಗಳ ವರ್ಗಾವಣೆ ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಸರ್ಕಾರ ಅಸ್ಥಿತ್ವಕ್ಕೆ ಬಂದಿರುವುದೇ ಅನೈತಿಕ ಮಾರ್ಗದಲ್ಲಿ.2018ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ. ಬಿಜೆಪಿಗೆ 104, ಕಾಂಗ್ರೆಸ್ 80 ಹಾಗೂ ಜೆಡಿಎಸ್ 38, ಇಬ್ಬರು ಪಕ್ಷೇತರರು ಗೆದ್ದಿದ್ದರು.ಬಿಜೆಪಿ ಅತಿದೊಡ್ಡ ಪಕ್ಷ ಎಂಬ ಕಾರಣಕ್ಕಾಗಿ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದರು.ಬಹುಮತ ಸಾಬೀತು ಮಾಡಲು ಯಡಿಯೂರಪ್ಪ ಅವರ ಕೈಯಲ್ಲಿ ಆಗಲಿಲ್ಲ. ಮೂರು ದಿನದಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.
ಮತಗಳಿಕೆ ಪ್ರಮಾಣದಲ್ಲೂ ಕಾಂಗ್ರೆಸ್ ಬಿಜೆಪಿಗಿಂತ ಶೇ.1.8ರಷ್ಟು ಮುಂದಿದೆ.ನಾವು 38.14ರಷ್ಟು ಮತ ಪಡೆದರೆ, ಬಿಜೆಪಿ 36.34ರಷ್ಟು ಮತ ಪಡೆದಿದೆ.ಅವರಿಗೆ ಜನಾದೇಶವಿಲ್ಲ. ಹಾಗಾಗಿ ನಾವು ಮೈತ್ರಿ ಸರ್ಕಾರ ರಚಿಸಿದ್ದೆವು.ಸರ್ಕಾರ ರಚಿಸಿದ ದಿನದಿಂದಲೂ ಬಿಜೆಪಿ ಕಿರಿಕಿರಿ ಮಾಡುತ್ತಲೇ ಇತ್ತು.ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್-ಜೆಡಿಎಸ್ ಶಾಸಕರ ಖರೀದಿಗೆ ಪ್ರಯತ್ನಿಸಿತ್ತು.
ದೇವ ದುರ್ಗದಲ್ಲಿ ಯಡಿಯೂರಪ್ಪ ಅವರು ಜೆಡಿಎಸ್ ಶಾಸಕರನ್ನು ಸೆಳೆಯಲು ನಡೆಸಿದ ಸಂಭಾಷಣೆಯ ಆಡಿಯೋ ಬಹಿರಂಗವಾದಾಗ ಅದನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದರು. ಆ ಮೇಲೆ ನಾವು ಆಪರೇಷನ್ ಕಮಲ ಮಾಡಲೇ ಇಲ್ಲ ಎಂದು ಹೇಳಿದರು.
ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಹಣ ಕೊಡುತ್ತಿದ್ದಾರೆ.ಖರೀದಿ ವ್ಯವಹಾರ ಮಾಡಿಲ್ಲ ಎಂದಾದರೆ ಹೆಚ್ಚು ಹಣ ಕೊಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
ಪಕ್ಷಾಂತರ ನಿಷೇಧ ಕಾಯ್ದೆ ಇಲ್ಲದೇ ಹೋಗಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದ ಅವರು, ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಅವರು 13 ಸ್ಥಾನ ಗೆಲ್ಲುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ನಾವು 15ಕ್ಕೆ 15 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪ ಚುನಾವಣೆಯಲ್ಲಿ ಕನಿಷ್ಠ 8 ಸ್ಥಾನ ಗೆಲ್ಲದೇ ಇದ್ದರೆ ಬಿಜೆಪಿಗೆ ಬಹುಮತ ಸಿಗುವುದಿಲ್ಲ. ಸರ್ಕಾರ ಅಲ್ಪಮತಕ್ಕೆ ಕುಸಿದು ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ.ಆಗ ಯಡಿಯೂರಪ್ಪ ರಾಜೀನಾಮೆ ನೀಡಬೇಕು.ಮತ್ತೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ನಾನು ಹೇಳುತ್ತಿದ್ದೇನೆ. ಇದಕ್ಕೆ ಬೇರೆ ರೀತಿಯ ವ್ಯಾಖ್ಯಾನ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜೀನಾಮೆ ನೀಡಿ ಪಕ್ಷಾಂತರ ಮಾಡಿದವರನ್ನು ಮಹಾರಾಷ್ಟ್ರ ಉಪ ಚುನಾವಣೆಯಲ್ಲಿ ಜನ ಸೋಲಿಸಿದ್ದಾರೆ. ಕರ್ನಾಟಕದಲ್ಲೂ ಅನರ್ಹ ಶಾಸಕರು ಮತ್ತೆ ಗೆಲ್ಲುವುದಿಲ್ಲ. ಜನ ತಕ್ಕ ಪಾಠ ಕಲಿಸುತ್ತಾರೆ.ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ.
ಲೋಕಸಭೆ ಚುನಾವಣೆ ರಾಷ್ಟ್ರೀಯ ವಿಷಯ ಆಧಾರಿತವಾಗಿ ನಡೆದರೆ, ವಿಧಾನಸಭೆ ಚುನಾವಣೆ ಸ್ಥಳೀಯ ವಿಷಯಗಳನ್ನು ಆಧರಿಸಿ ನಡೆಯಲಿವೆ ಎಂದರು.
ಲೋಕಸಭೆ ನಂತರ ನಡೆದ ವಿಧಾನಸಭೆ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನೆರೆ ಸಂತ್ರಸ್ತರ ಕಣ್ಣೊರೆಸುವ ಕೆಲಸವನ್ನು ಯಡಿಯೂರಪ್ಪ ಸರ್ಕಾರ ಮಾಡಿಲ್ಲ. ಜನರಿಗೆ ಸುಳ್ಳು ಮಾಹಿತಿಗಳನ್ನು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಸುಮಾರು 2 .42ಲಕ್ಷ ಮನೆಗಳು ಬಿದ್ದು ಹೋಗಿವೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೆ, ನಿನ್ನೆ ನೀಡಿರುವ ಜಾಹೀರಾತಿನಲ್ಲಿ 97 ಸಾವಿರ ಮನೆಗಳು ಮಾತ್ರ ಬಿದ್ದಿವೆ ಎಂದು ತಿಳಿಸಿದ್ದಾರೆ.
ಸಂತ್ರಸ್ತರ ತಾತ್ಕಾಲಿಕ ವಸತಿಗಾಗಿ ನಿರ್ಮಿಸಿರುವ ಶೆಡ್ಗಳಲ್ಲಿ ಕುಡಿಯುವ ನೀರು, ಶೌಚಾಲಯಗಳು ಸೇರಿ ಯಾವುದೇ ಮೂಲ ಸೌಲಭ್ಯಗಳು ಇಲ್ಲ ಎಂದರು.
ನಾನು 40 ವರ್ಷ ರಾಜಕಾರಣ ಮಾಡಿ ವಿವಿಧ ಹುದ್ದೆಗಳನ್ನು ಅನುಭವಿಸಿದ್ದೇನೆ. ಬೇಜವಾಬ್ದಾರಿಯಾಗಿ ಮಾತನಾಡುವ ರಾಜಕಾರಣಿಯಲ್ಲ. ಸರ್ಕಾರ ಕೇಂದ್ರಕ್ಕೆ ನೀಡಿರುವ ವರದಿಯ ಅಂಕಿ ಅಂಶಗಳೇ ಬೇರೆ, ಜಾಹೀರಾತಿನಲ್ಲಿ ಪ್ರಕಟಿಸಿರುವ ವರದಿಯೇಬೇರೆ .ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಹಾಲು ಉತ್ಪಾದಕರಿಗೆ ನೀಡುವ 5ರೂ. ಪೆÇ್ರೀ ಧನ ಏಪ್ರಿಲ್ನಿಂದ ಬಿಡುಗಡೆಯಾಗಿಲ್ಲ. 800 ಕೋಟಿ ಬಾಕಿ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ದೇಶ ಹಾಗೂ ರಾಜ್ಯದ ರೈತರು ಬೀದಿ ಪಾಲಾಗಲಿದ್ದಾರೆ. ಹೈನುಗಾರಿಕೆ ನಾಶವಾಗಲಿದೆ. ಇದರಿಂದ ರೈತರು ಆತಂಕ, ಗೊಂದಲದಲ್ಲಿದ್ದಾರೆ.ಕೇಂದ್ರ ಸರ್ಕಾರದ ಕಾರ್ಯಕ್ರಮವೇ ಆಗಿದ್ದರೂ ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟು ಸ್ಪಷ್ಟನೆ ಕೊಡಿಸುವ ಜವಾಬ್ದಾರಿಯುತ ಕೆಲಸ ಮಾಡಬೇಕಿತ್ತು.ನಾಡಿನಾದ್ಯಂತ ರೈತರು ಬೀದಿಗಿಳಿದಿದ್ದಾರೆ.ಬಿಜೆಪಿ ಸರ್ಕಾರ ತನಗೂ ಅದಕ್ಕೂ ಸಂಬಂಧವಿಲ್ಲದಂತಿದೆ ಎಂದು ಕಿಡಿಕಾರಿದರು.
ಡಿಕೆಶಿ ನನ್ನ ಮಧ್ಯೆ ಭಿನ್ನಾಭಿಪ್ರಾಯವಿಲ್ಲ:
ಉಪಚುನಾವಣೆ ಟಿಕೆಟ್ ಹಂಚಿಕೆ ಸೇರಿದಂತೆ ಯಾವುದೇ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯಗಳಿಲ್ಲ.
ಅಭಿಪ್ರಾಯಗಳು ಬೇರೆ ಬೇರೆ ಇರಬಹುದು.ಆದರೆ, ಅವು ಭಿನ್ನಾಭಿಪ್ರಾಯಗಳಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾರ ನಡುವೆಯೂ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದೇವೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.
ಟಿಪ್ಪು ಸುಲ್ತಾನ್ ವಿಷಯದಲ್ಲಿ ಬಿಜೆಪಿ ನಾಯಕರು ಇಬ್ಬಂದಿ ತನ ಅನುಸರಿಸುತ್ತಿದ್ದಾರೆ. ಈ ಮೊದಲೆಲ್ಲಾ ಟಿಪ್ಪುಸುಲ್ತಾನ್ ದೇಶ ಭಕ್ತ, ಮೈಸೂರು ಹುಲಿ ಎಂದೆಲ್ಲಾ ಹೊಗಳಿದರು.ಅಶೋಕ್, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತಿರರು ಟಿಪ್ಪು ಟೋಪಿ ಹಾಕಿಕೊಂಡು ಫೆÇೀಸ್ ಕೊಟ್ಟಿದ್ದರು.ಯಡಿಯೂರಪ್ಪನವರು ನಾನೇ ಟಿಪ್ಪು ಎಂದು ಹೇಳಿಕೆ ಕೊಟಿದ್ದರು.ಆದರೆ, ಈಗ ಉಪ ಚುನಾವಣೆ ಸಂದರ್ಭದಲ್ಲಿ ರಾಜಕಾರಣಕ್ಕಾಗಿ ಟಿಪ್ಪುವನ್ನು ಮತಾಂಧ ಎಂದು ಟೀಕಿಸುತ್ತಿದ್ದಾರೆ.ಇತಿಹಾಸ ತಿರುಚುವುದರಲ್ಲಿ ಬಿಜೆಪಿಯವರು ನಿಪುಣರು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪ್ರೆಸ್ಕ್ಲಬ್ನ ಅಧ್ಯಕ್ಷ ಸದಾಶಿವಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್ಕುಮಾರ್, ಬೆಂಗಳೂರು ವರದಿಗಾರರ ಕೂಟದ ಉಪಾಧ್ಯಕ್ಷ ಆರ್.ಟಿ.ವಿಠಲ್ಮೂರ್ತಿ, ಪ್ರಧಾನಕಾರ್ಯದರ್ಶಿ ಕಿರಣ್ಕುಮಾರ್ ಮತ್ತಿತರರು ಹಾಜರಿದ್ದರು.