ನಾಳೆ ಕನ್ನಡ ರಾಜ್ಯೋತ್ಸವ ಹಿನ್ನಲೆ-ವಿವಿಧ ಸಂಘಸಂಸ್ಥೆಗಳು ನಾಳೆ ಕನ್ನಡ ಉತ್ಸವ ಆಚರಣೆ

ಬೆಂಗಳೂರು,ಅ.31- ನಾಡಹಬ್ಬ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ  ಹಲವೆಡೆ ವಿವಿಧ ಸಂಘಸಂಸ್ಥೆಗಳು ನಾಳೆ ಕನ್ನಡ ಉತ್ಸವವನ್ನು ಆಚರಿಸುತ್ತಿವೆ.

ಬೆಂಗಳೂರು ವುಮೆನ್ ಪವರ್ ಸಂಸ್ಥೆ ವತಿಯಿಂದ ಕಬ್ಬನ್‍ಪಾರ್ಕ್‍ನಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ಯಕ್ಷಗಾನ, ಡೋಲು, ಭರತನಾಟ್ಯ, ಬೈಕರ್ಸ್ ರ್ಯಾಲಿ, ಮಹಿಳಾ ಉದ್ಯಮಿಗಳ ಮಳಿಗೆ, ಮಹಿಳೆಯರ ವಿಭಿನ್ನ ಜಾನಪದ ನೃತ್ಯ, ಸಾಧಕರಿಗೆ ಪ್ರಶಸ್ತಿ ಸೇರಿದಂತೆ ಇನ್ನಿತರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಸ್ತೂರಿ ಕನ್ನಡ ಡಾ.ರಾಜ್ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘ ಹಾಗೂ ಬಸವೇಶ್ವರನಗರ ನಾಗರಿಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಬಸವೇಶ್ವರನಗರದ ಟ್ರಿನಿಟಿ ಮೋಟಾರ್ಸ್ ಬಳಿ ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದೆ.

ತಾಯಿ ಭುವನೇಶ್ವರಿ ಮತ್ತು ವರನಟ ಡಾ.ರಾಜ್‍ಕುಮಾರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಗುವುದು.ಇದೇ  ವೇಳೆ ಮನೆ ಮನೆಗೂ ಉಚಿತ ಕನ್ನಡ ಸಾಹಿತ್ಯ ಪುಸ್ತಕ ವಿತರಣಾ ಅಭಿಯಾನ ಹಾಗೂ ಗೋವಿಂದರಾಜನಗರ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್‍ನ ಕಚೇರಿ ಉದ್ಘಾಟನೆ ನೆರವೇರಿಸಲಾಗುತ್ತಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕøತ ಗಾಯಕ ಶಿವಮೊಗ್ಗ ಸುಬ್ಬಣ್ಣ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಮಾಯಣ್ಣಪಾಲ್ಗೊಳ್ಳಲಿದ್ದಾರೆ.

ಶ್ರೀ ಮುರುದೇವಗೌಡ ರಂಗಮಂದಿರದಲ್ಲಿ ರಾಜ್ಯೋತ್ಸವ: ಭಾರತ ವಿದ್ಯಾಸಂಸ್ಥೆ, ಬಿಇಎಸ್ ಕಲೆ ಮತ್ತು ವಾಣಿಜ್ಯ ಸಂಜೆ ಮಹಾವಿದ್ಯಾಲಯದಿಂದ ನಾಳೆ ಬೆಳಗ್ಗೆ 9ಕ್ಕೆ ಶ್ರೀ ಮುರುದೇವಗೌಡ ರಂಗಮಂದಿರದಲ್ಲಿ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಎಸ್.ರವೀಶ್ ಅವರ 3ನೇ ಕಾದಂಬರಿ ಮುಂಜಾವಿನ ಮೌನ ಪುಸ್ತಕ ಬಿಡಗುಡೆಯಾಗಲಿದೆ.

ಪುಸ್ತಕ ಕುರಿತು  ಸಾಹಿತಿ ಎಸ್.ಎಚ್.ಭುವನೇಶ್ವರ್ ಮಾತನಾಡಲಿದ್ದಾರೆ. ಜಾನಪ ವಿದ್ವಾಂಸ ಡಾ.ಹಿ.ಚಿ.ಬೋರಲಿಂಗಯ್ಯ , ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.   ಕಾರ್ಯದರ್ಶಿ ನಾ.ಕೃಷ್ಣದಾಸ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು,ಉಪಾಧ್ಯಕ್ಷ ಕೆ.ರಾಮು ಖಜಾಂಚಿ ಬಿ.ಎಲ್.ನಂದಿನಿ ಉಪಸ್ಥಿತರಿರುವರು.

ಕಪಿಲಾ ಕನ್ನಡ ಸಂಘ ಹಾಗೂ ಕರ್ನಾಟಕ ಆಂಟಿ ಬಯೋಟಿಕ್ಸ್ ಮತ್ತು ಫರ್ಮಾನ್ಯೂಟಿಕಲ್ಸ್ ಲಿಮಿಟೆಡ್‍ನ ಸಹಯೋಗದಲ್ಲಿ ನಾಳೆ ಬೆಳಗ್ಗೆ 8.30ಕ್ಕೆ ಕೆಎಪಿಎಲ್ ಕಾರ್ಖಾನೆ ಆವರಣದಲ್ಲಿ ವೈಭವದ ಕರ್ನಾಟಕ  ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಖಾನೆಯ ವ್ಯವಸ್ಥಾಪಕ ನಿದೇಶಕ ಸುನೀಲ್‍ಕುಮಾರ್, ಕೈಮಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಹಾಗೂ ವೈದ್ಯ ಡಾ.ನಾ.ಸೋಮೇಶ್ವರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹೃದಯ ತಜ್ಞ ಡಾ.ಬಿ.ರಮಣರಾವ್, ಕಿರುತೆರೆ ಕಲಾವಿದೆ ರಾಧಾರಾಮಚಂದ್ರ, ನಿವೃತ್ತ ಸೈನಿಕ ವಿರೂಪಾಕ್ಷ ಮುಕ್ಕಣ್ಣನವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ವೇಳೆ ಮಕ್ಕಳಿಗೆ ಸಾಮಾನ್ಯಜ್ಞಾನ ಸ್ಪರ್ಧೆ, ಸಂಗೀತ ಕುರ್ಚಿ ಸ್ಪರ್ಧೆ  ಮಧ್ಯಾಹ್ನ ವಾದ್ಯಗೋಷ್ಠಿ ಹಾಗೂ ನೃತ್ಯ, ಮಿಮಿಕ್ರಿ ಕಲಾವಿದ ರಮೇಶ್‍ಬಾಬು ಅವರಿಂದ ಕಾರ್ಯಕ್ರಮಗಳು ನಡೆಯಲಿದೆ.

ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿಯು ನಾಳೆ ಕೆಂಪೇಗೌಡ ರಸ್ತೆಯ ಬನಪ್ಪ ಪಾರ್ಕ್‍ನಲ್ಲಿ ಶ್ರೀ ಪರಮೇಶ್ವರ ಪುಲಿಕೇಶಿ ಮಹಾಮಂಟಪದಲ್ಲಿ ಕನ್ನಡ ರಾಜ್ಯೋತ್ಸವ ಆಯೋಜಿಸಿದೆ. ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ ಗಂಗಾವತಿ, ಚಳುವಳಿ ಸಮಿತಿಯ ಅಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಸಂಜೆ 7 ಗಂಟೆಗೆ   ಪರಮೇಶ್ವರ ಪುಲಿಕೇಶಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹಿರೇಮಠ ಮಹಾಸಂಸ್ಥಾನದ  ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸ್ವಪ್ನ ಬುಕ್‍ಹೌಸ್‍ನಿಂದ ರಾಜ್ಯೋತ್ಸವ: ಸ್ವಪ್ನ ಬುಕ್‍ಹೌಸ್‍ನಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಳೆ ಕುಮಾಪಾರ್ಕ್ ಪೂರ್ವ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಲ್ಲಿ ಓದು ಜನಮೇಜಯ ಕನ್ನಡ ಪುಸ್ತಕೋದ್ಯಮ ಸಂಭ್ರಮ ಕುರಿತ ವಿಚಾರ ಗೋಷ್ಠಿ  ಆಯೋಜಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ