ಕರ್ನಾಟಕವನ್ನು ಅಪೌಷ್ಠಿಕತೆಯಿಂದ ಮುಕ್ತಗೊಳಿಸಲು ಸಂಘಸಂಸ್ಥೆಗಳು ಮುಂದಾಗಬೇಕು- ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು,ಅ.31-ಕರ್ನಾಟಕವನ್ನು ಅಪೌಷ್ಠಿಕತೆಯಿಂದ ಮುಕ್ತಗೊಳಿಸಲು ಸಂಘಸಂಸ್ಥೆಗಳು ಮುಂದಾಗಬೇಕು, ಸರ್ಕಾರ ಇದಕ್ಕೆ  ಎಲ್ಲ ರೀತಿಯ ಸಹಕಾರ ಮತ್ತು ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರು.

ವಿಧಾನಸೌಧದ ಆವರಣದಲ್ಲಿ ಶ್ರೀ ಸತ್ಯ ಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ ಹಾಗೂ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ  ಅಪೌಷ್ಠಿಕತೆ ನಿವಾರಿಸುವ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಪೌಷ್ಠಿಕತೆಯಿಂದಾಗಿ ಹುಟ್ಟುವ ಮಕ್ಕಳಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕೆಂಬುದು ಸರ್ಕಾರದ ಮುಖ್ಯ ಉದ್ದೇಶಗಳಲ್ಲೊಂದು.

ಬಜೆಟ್‍ನಲ್ಲಿ ನಾವು  ಇದರ ನಿವಾರಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೇವೆ. ಇವುಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕೆಂದು ಸಲಹೆ ಮಾಡಿದರು.

ಯಾವ ಯಾವ ಭಾಗಗಳಲ್ಲಿ ಜನರು  ಶಿಕ್ಷಣದಿಂದ ವಂಚಿತವಾಗಿರುತ್ತಾರೋ ಅಂತಹ ಕಡೆ ಅಪೌಷ್ಠಿಕತೆಯ ಬಗ್ಗೆ  ಅರಿವು ಇರುವುದಿಲ್ಲ. ಸಂಘಸಂಸ್ಥೆಗಳು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಪೌಷ್ಠಿಕತೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಬೇಕೆಂದು ಸಲಹೆ ಮಾಡಿದರು.

ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಮಹಿಳೆಯರಿಗೆ  ಸರ್ಕಾರದ ಕಾರ್ಯಕ್ರಮಗಳ ಬಗ್ಗೆ  ಅರಿವು ಇರುವುದಿಲ್ಲ. ಸರ್ಕಾರದ ಯೋಜನೆಗಳ ಬಗ್ಗೆ ಸೂಕ್ತ ಸಲಹೆ ನಿರ್ದೇಶನಗಳನ್ನು ನೀಡಬೇಕು. ವಿಶೇಷವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಹೇಳಿ. ನಿಮಗೆ ಬೇಕಾದ  ಸವಲತ್ತುಗಳನ್ನು ಸರ್ಕಾರ ನೀಡಲು  ಸಿದ್ಧವಿದೆ ಎಂದು ಹೇಳಿದರು.

ಅಪೌಷ್ಟಿಕತೆ ನಿವಾರಣೆಗಾಗಿ  ಶ್ರೀ ಸತ್ಯ ಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ ಹಾಗೂ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್  ಮಾಡುತ್ತಿರುವ ಸೇವೆ ಅನನ್ಯವಾದುದು.  ಸಂಘ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದು ಇಂತಹ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಕರೆಕೊಟ್ಟರು.

ಈ ವೇಳೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಸುರೇಶ್ ಕುಮಾರ್, ಶಶಿಕಲಾ ಜೊಲ್ಲೆ, ಬಸವರಾಜ್ ಹೊರಟ್ಟಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ