ಬೆಂಗಳೂರು,ಅ.31- ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ತುಸು ಹಿನ್ನಡೆ ಅನುಭವಿಸಿರುವ ಬಿಜೆಪಿ ಸ್ಥಳೀಯ ನಾಯಕರಿಗೆ ಮಣೆ ಹಾಕುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮುಕ್ತ ಸ್ವತಂತ್ರ ನೀಡಲು ಮುಂದಾಗಿದ್ದಾರೆ.
ಡಿಸೆಂಬರ್ 5ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆ, ಚುನಾವಣಾ ಕಾರ್ಯತಂತ್ರ ಸೇರಿದಂತೆ ಎಲ್ಲ ವಿಷಯದಲ್ಲೂ ಬಿಎಸ್ವೈಗೆ ಪರಮಾಧಿಕಾರ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ.
ಸ್ಥಳೀಯ ನಾಯಕರನ್ನು ಕಡೆಗಣಿಸಿದರೆ ಏನಾಗುತ್ತದೆ ಎಂಬುದಕ್ಕೆ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಕ್ಷೇತ್ರಗಳ ಚುನಾವಣೆ ನಿದರ್ಶನವಾಗಿರುವುದರಿಂದ ಬಿಎಸ್ವೈಗೆ ಅನಿವಾರ್ಯವಾಗಿ ಮಣೆ ಹಾಕಲೇಬೇಕಾಗಿದೆ.
ಹೀಗಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಸುಭದ್ರ ಸರ್ಕಾರ, ಜನಪರ ಆಡಳಿತ ನೀಡಲು ಅನುವಾಗುವಂತೆ ಆಡಳಿತದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡದಿರುವುದು ಹಾಗೂ ಉಪಚುನಾವಣೆಗೆ ಜವಾಬ್ದಾರಿಯನ್ನು ಬಿಎಸ್ವೈಗೆ ಹೆಗಲಿಗೆ ನೀಡಬೇಕೆಂಬ ಲೆಕ್ಕಾಚಾರಕ್ಕೆ ಬರಲಾಗಿದೆ.
ಈವರೆಗೂ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಮತ್ತು ಟಿಕೆಟ್ ನೀಡುವ ಸಂಬಂಧ ವರಿಷ್ಠರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದ್ದವು.
ಆದರೆ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಏರುಪೇರಾಗಿರುವುದರಿಂದ ಒಲ್ಲದ ಮನಸ್ಸಿನಿಂದಲೇ ಬಿಎಸ್ವೈಗೆ ಮಣೆ ಹಾಕುವ ಮೂಲಕ ಹೆಚ್ಚಿನ ಸ್ಥಾನ ಗಳಿಸುವ ಲೆಕ್ಕಾಚಾರದಲ್ಲಿದೆ.
ಉಪಚುನಾವಣೆಗೆ ಇನ್ನು ಕೇವಲ ಒಂದು ತಿಂಗಳು ಇರುವ ಹಿನ್ನೆಲೆಯಲ್ಲಿ ನ.3ರಿಂದ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಒಂದು ಸುತ್ತಿನ ಪ್ರಚಾರವನ್ನು ನಡೆಸಲಿದ್ದಾರೆ.
ಮೊದಲ ವಾರದಲ್ಲಿ ಅನರ್ಹ ಶಾಸಕರ ಕುರಿತಂತೆ ಸುಪ್ರೀಂಕೋರ್ಟ್ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಅಷ್ಟರೊಳಗೆ 15 ವಿಧಾನಸಭಾ ಕ್ಷೇತ್ರಗಳಿಗೆ ಒಂದು ಸುತ್ತು ಭೇಟಿ ಕೊಟ್ಟು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಮತದಾರರಿಗೆ ಮನವಿ ಮಾಡುವರು.
ಹೈಕಮಾಂಡ್ನಿಂದ ಸೂಚನೆ ಬರುತ್ತಿದ್ದಂತೆ ಅಖಾಡಕ್ಕಿಳಿದಿರುವ ಯಡಿಯೂರಪ್ಪ ಅನರ್ಹ ಶಾಸಕರ ಕ್ಷೇತ್ರಗಳಿಗೆ ವಿಶೇಷ ಗಮನ ನೀಡಿದ್ದು, ಹೆಚ್ಚಿನ ಅನುದಾನ ನೀಡುತ್ತಿದ್ದಾರೆ.
ಈಗಾಗಲೇ ಹಿರೇಕೆರೂರು, ಕೆ.ಆರ್.ಪೇಟೆ, ಹುಣಸೂರು, ಹೊಸಕೋಟೆ, ಚಿಕ್ಕಬಳ್ಳಾಪುರ ಮತ್ತಿತರ ಕ್ಷೇತ್ರಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ.
ಉಪಚುನಾವಣೆ ಫಲಿತಾಂಶ ಯಡಿಯೂರಪ್ಪನವರ ರಾಜಕೀಯ ಅಸ್ತಿತ್ವವನ್ನು ತೀರ್ಮಾನಿಸುವ ಚುನಾವಣೆಯಾಗಿರುವುದರಿಂದ ಶತಾಯಗತಾಯ ಹೆಚ್ಚಿನ ಸ್ಥಾನ ಗಳಿಸಲು ರಣತಂತ್ರ ರೂಪಿಸಿದ್ದಾರೆ.