ಸಿದ್ದರಾಮಯ್ಯನವರು ಒಡೆದಾಳುವ ವಿಚಾರದಲ್ಲಿ ಕಿಂಗ್ ಅಂಡ್ ಕಿಂಗ್ ಮೇಕರ್-ಸಚಿವ ಸಿ.ಟಿ.ರವಿ

ಬೆಂಗಳೂರು,ಅ.31-ಟಿಪ್ಪು ಇತಿಹಾಸವನ್ನು ಒಮ್ಮೆ ಸರಿಯಾಗಿ ಓದಿಕೊಂಡರೆ ಯಾರು ಮತಾಂಧರು, ಇನ್ಯಾರು ಜಾತ್ಯತೀತರು ಎಂಬುದು ಗೊತ್ತಾಗುತ್ತದೆ ಎಂದು ಸಚಿವ ಸಿ.ಟಿ.ರವಿ ವಿಧಾನಸಭೆಯ  ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು  ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 72 ವರ್ಷದಿಂದ ಟಿಪ್ಪು ಜಯಂತಿಯನ್ನು ಆಚರಣೆ ಮಾಡದಿರುವಾಗ ಸಿದ್ದರಾಮಯ್ಯನವರು ಯಾವ ಕಾರಣಕ್ಕಾಗಿ ಈ ಜಯಂತಿಯನ್ನು ಪ್ರಾರಂಭಿಸಿದರು ಎಂಬುದರ ಸೂಕ್ಷ್ಮತೆಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಮತ ಬ್ಯಾಂಕ್‍ಗಾಗಿ ಮಾಡಿದ್ದು,  ಇಲ್ಲವೇ ಅವರ ಮೇಲಿನ ಪ್ರೀತಿಗಾಗಿ ಆಚರಣೆ ಮಾಡಿದರೇ ಎಂದು  ಪ್ರಶ್ನೆ ಮಾಡಿದರು.

ಉಪಚುನಾವಣೆಯಲ್ಲಿ ಟಿಪ್ಪು ವಿವಾದವನ್ನು ನಾವು ಬಳಸಿಕೊಳ್ಳಬೇಕಾದ ಅಗತ್ಯವಿಲ್ಲ. ನಮ್ಮ ಸರ್ಕಾರ ಏನು ಮಾಡಿದೆ ಎಂಬುದರ ಮೇಲೆಯೇ ಮತದಾರ ಮತ ಹಾಕುತ್ತಾನೆ. ನೀವು ರಾಜಕೀಯ ದುರುದ್ದೇಶದಿಂದ ಟಿಪ್ಪು ಜಯಂತಿ ಜಾರಿಗೆ ತಂದರೆ ಅದನ್ನು ಒಪ್ಪಲು ಸಾಧ್ಯವೇ ಎಂದು ತಿರುಗೇಟು ಕೊಟ್ಟರು.

ಟಿಪ್ಪು ಜಯಂತಿ ಆಚರಿಸಿದ್ದು ರಾಜಕೀಯ ಉದ್ದೇಶಕ್ಕಾಗಿ ಚುನಾವಣಾ ಕೊನೆಯ ವರ್ಷದಲ್ಲಿ ಕನ್ನಡಕ್ಕೆ ಪ್ರತ್ಯೇಕ ಧ್ವಜ ನೆನಪಾಗುತ್ತದೆ. ವೀರಶೈವ ಲಿಂಗಾಯಿತ ಸಮುದಾಯವನ್ನು ಇಬ್ಭಾಗ ಮಾಡುವ ದುರಾಲೋಚನೆ ಬರುತ್ತದೆ.ನೀವು ಮಾಡುವುದು ಸರಿಯಾದರೆ ನಾವೂ ಮಾಡಿದ್ದು ಸರಿಯೆಂದು ತಿರುಗೇಟು ಕೊಟ್ಟರು.

ವೀರಶೈವ ಮತ್ತು ಲಿಂಗಾಯಿತರ ನಡುವೆ ಬೆಂಕಿ ಹಚ್ಚಿದ್ದೇ ಸಿದ್ದರಾಮಯ್ಯನವರು. ಅವರು ಒಡೆದಾಳುವ ವಿಚಾರದಲ್ಲಿ ಕಿಂಗ್ ಅಂಡ್ ಕಿಂಗ್ ಮೇಕರ್  ಎಂದು ವ್ಯಂಗ್ಯವಾಡಿದರು.

ಸರ್ಕಾರ ಸತ್ತು ಹೋಗಿದೆ ಎಂಬ ಸಿದ್ದರಾಮಯ್ಯನವರ ಆರೋಪಕ್ಕೆ  ಉಗ್ರರಾದ ಸಿ.ಟಿ.ರವಿ, ಅವರ ಸರ್ಕಾರ ಸತ್ತು ಹೋದ ಮೇಲೆಯೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂತು. ಕಾಂಗ್ರೆಸ್ ಸತ್ತು ಹೋಗಿರುವುದರಿಂದಲೇ ಸಿದ್ದರಾಮಯ್ಯನವರು ಹತಾಶರಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ.

ನೆರೆ ಪರಿಹಾರವಾಗಿ 50 ಸಾವಿರದಿಂದ ಒಂದು ಲಕ್ಷದ ಪರಿಹಾರವನ್ನು ನೀಡಿರುವುದು ನಮ್ಮ ಸರ್ಕಾರ.ನಮ್ಮ ಸರ್ಕಾರ ಸತ್ತು ಹೋಗಿದ್ದರೆ ಪರಿಹಾರ ನೀಡಲು ಹೇಗ ಸಾಧ್ಯವಾಗುತ್ತಿತ್ತು. ಹತಾಶ ಮನೋಭಾವದಿಂದ ಸಿದ್ದರಾಮಯ್ಯನವರು ಮಾತನಾಡುತ್ತಿದ್ದಾರೆ. ಏಕೆಂದರೆ ಕಾಂಗ್ರೆಸ್ ಸತ್ತು ಹೋಗಿ ಅವರಿಗೆ ಭವಿಷ್ಯವಿಲ್ಲ ಎಂಬುದು ಅವರಿಗೆ ಅರಿವಾಗಿದೆ. ಹೀಗಾಗಿ  ಏನೇನೊ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾವಾಗ ಹೇಗೆ ದಾಳ ಉರುಳಿಸುತ್ತಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಅವರದು ಒಂದೊಂದು ಸಮಯಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.ಅವರು ಯಾವ ಉದ್ದೇಶ ಇಟ್ಟುಕೊಂಡು ಬಿಜೆಪಿ ಸರ್ಕಾರ ಪತನವಾಗುವುದಿಲ್ಲ ಎಂದು ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಕುಮಾರಸ್ವಾಮಿ ಅವರದು ಪಿತ್ರಾರ್ಜಿತ ರಾಜಕೀಯ.ನಮ್ಮದು ಸ್ವಯಾರ್ಜಿತ ರಾಜಕೀಯ.ಪಿತ್ರಾರ್ಜಿತ ರಾಜಕೀಯದಲ್ಲಿ ದಾಳ ಇಟ್ಟುಕೊಂಡು ಎಲ್ಲಿ ಬೇಕಾದರೂ ಉರುಳಿಸಬಹುದು. ನಾವು ಕೂಡ ಅದರ ಲಾಭ ಪಡೆಯಲು ಉತ್ಸುಕರಾಗಿದ್ದೇವೆ ಎಂದು  ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ