ಬೆಂಗಳೂರು, ಅ.31- ಬೆಂಗಳೂರು ಅಭಿವೃದ್ಧಿಗೆ ನೀಲಿ ನಕ್ಷೆ ಸಿದ್ಧಪಡಿಸಲಾಗಿದ್ದು, ಕಾಲಮಿತಿಯೊಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ನಲ್ಲಿ ನಿರ್ಮಿಸಲಾಗಿರುವ ಪ್ರಕೃತಿವನ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಮುಖ್ಯಮಂತ್ರಿ ಆದ ನಂತರ ವಾರಕ್ಕೊಮ್ಮೆ ನಗರ ಪ್ರದಕ್ಷಿಣೆ ಮಾಡುವುದಾಗಿ ತಿಳಿಸಿದ್ದೆ.ಒಂದು ಸಾರಿ ಮಾತ್ರ ಪ್ರದಕ್ಷಿಣೆ ಮಾಡಲು ಸಾಧ್ಯವಾಯಿತು. ಈಗ ಮತ್ತೆ ನಗರ ಪ್ರದಕ್ಷಿಣೆ ಪ್ರಾರಂಭಿಸುತ್ತೇನೆ ಎಂದು ಹೇಳಿದರು.
ಇತ್ತೀಚೆಗೆ ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ.ಅರಣ್ಯ ಸಂಪತ್ತು ನಾಶ ಮಾಡುತ್ತಿರುವುದರಿಂದ ಪರಿಸರದಲ್ಲಿ ಏರುಪೇರಾಗುತ್ತಿದೆ.ಕಲೆದ ಐದು ದಶಕಗಳಲ್ಲಿ ವಿಶ್ವದ ಶೇ.8ರಷ್ಟು ಅರಣ್ಯ ಸಂಪತ್ತು ಶೇ.27ರಷ್ಟು ಬೆಟ್ಟಗುಡ್ಡಗಳು ನಾಶವಾಗಿವೆ. ಸಮುದ್ರ ಹೊರತುಪಡಸಿ ಶೇ.40ರಷ್ಟು ಜಲ ಸಂಪತ್ತು ಕಲುಷಿತಗೊಂಡಿದೆ.ಕಳೆದ ಒಂದು ಶತಮಾನದಲ್ಲಿ ಏಳು ನದಿಗಳು ಅಸ್ತಿತ್ವವನ್ನೇ ಕಳೆದುಕೊಂಡಿವೆ ಎಂದು ಹೇಳಿದರು.
ಪ್ರಕೃತಿ ಕಾಪಾಡುವ ಬಗ್ಗೆ ಇತ್ತೀಚೆಗೆ ಜನರಲ್ಲಿ ಅರಿವು ಹೆಚ್ಚಾಗುತ್ತಿದೆ.ಪ್ರಕೃತಿಯ ರಕ್ಷಣೆ, ಪ್ರಾಕೃತಿಕ ದೈವದ ಸೇವೆ ಪರಿಕಲ್ಪನೆಯೊಂದಿಗೆ ಯಡಿಯೂರು ವಾರ್ಡ್ನಲ್ಲಿ ನಿರ್ಮಿಸಿರುವ ಪ್ರಕೃತಿವನ ಅತ್ಯದುಭತವಾಗಿದೆ ಎಂದು ಬಣ್ಣಿಸಿದರು.
ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಮಾತನಾಡಿ, 43 ಅಡಿ ಎತ್ತರದ ಪ್ರಕೃತಿ ದೇವನ ಮೂರ್ತಿ ನಿರ್ಮಾಣ ಮಾಡಲಾಗಿದೆ.ಜತೆಗೆ ವನದೇವಿ ತನ್ನ ಮಗುವಿನೊಂದಿಗೆ ಕಣೀರಿಡುತ್ತಿರುವ ಕಲಾಕೃತಿ ನದಿ ಮೂಲದಲ್ಲಿರುವ ಪ್ರಾಕೃತಿಕ ಸಂಪತ್ತುಗಳ ಕಲಾಕೃತಿಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಹಿಮಾಲಯ, ದಾಂಡೇಲಿ, ಆಗುಂಬೆ ಮತ್ತಿತರ ದಟ್ಟಾರಣ್ಯಗಳಿಂದ ಆಯ್ದು ತಂದಿರುವ ಅಮೂಲ್ಯ ಗಿಡಮೂಲಿಕೆ ಸಸಿಗಳನ್ನು ಒಂದೂವರೆ ಎಕರೆ ಪ್ರದೇಶದ ಪ್ರಕೃತಿ ವನದಲ್ಲಿ ಬೆಳೆಸಲಾಗಿದೆ.ಇಡೀ ಉದ್ಯಾನವನದಲ್ಲಿ ಗಮನ ಸೆಳೆಯುವ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಯಡಿಯೂರು ಜೈವಿಕ ಅನಿಲ ಘಟಕದ ತ್ಯಾಜ್ಯದಿಂದ ಉತ್ಪಾದಿಸುತ್ತಿರುವ ವಿದ್ಯುತ್ಅನ್ನು ಈ ದೀಪಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಂದಾಯ ಸಚಿವ ಆರ್.ಅಶೋಕ್, ಮೇಯರ್ ಗೌತಮ್ಕುಮಾರ್ ಜೈನ್, ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಆಯುಕ್ತ ಅನಿಲ್ಕುಮಾರ್, ಯಡಿಯೂರು ವಾರ್ಡ್ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.