ಡಿ.ಕೆ.ಶಿವಕುಮಾರ್ ಅವರಿಗೆ ಚುನಾವಣಾ ಉಸ್ತುವಾರಿನೀಡಬೇಕು-ಕ್ಷೇತ್ರಗಳ ನಾಯಕರಿಂದ ತೀವ್ರ ಒತ್ತಡ

ಬೆಂಗಳೂರು, ಅ.31-ಮಾಜಿ ಸಚಿವ ಹಾಗೂ  ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಚುನಾವಣೆಯ ಉಸ್ತುವಾರಿ ನೀಡಬೇಕೆಂದು ಕ್ಷೇತ್ರಗಳ ನಾಯಕರಿಂದ ತೀವ್ರ ಒತ್ತಡ  ಕೇಳಿ ಬಂದಿದೆ.

ಕೆಪಿಸಿಸಿ ಅಧ್ಯಕ್ಷರನ್ನು ನಿರಂತರವಾಗಿ ಭೇಟಿ ಮಾಡುತ್ತಿರುವ ಉಪಚುನಾವಣೆ ನಡೆಯುವ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು, ನಮಗೆ ಟಿಕೆಟ್ ನೀಡಬೇಕು ಎಂಬ ಲಾಬಿಯ ಜತೆಗೆ  ಡಿ.ಕೆ.ಶಿವಕುಮಾರ್ ಅವರಿಗೆ  ಚುನಾವಣಾ ಉಸ್ತುವಾರಿ ನೀಡಿ ಎಂದು  ಒತ್ತಡ ಹೇರುತ್ತಿದ್ದಾರೆ.

ಈ ಮೊದಲು ಡಿ.ಕೆ.ಶಿವಕುಮಾರ್ ಅವರು ಜವಾಬ್ದಾರಿ ವಹಿಸಿಕೊಂಡ ಕ್ಷೇತ್ರಗಳ ಪೈಕಿ ಶಿವಮೊಗ್ಗ ಲೋಕಸಭೆ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

ಡಿ.ಕೆ.ಶಿವಕುಮಾರ್ ಕೇವಲ ನೆಪಮಾತ್ರಕ್ಕಷ್ಟೇ ಉಸ್ತುವಾರಿಯಾಗಿ ಚುನಾವಣೆ ನಡೆಸುವುದಿಲ್ಲ. ಗೆಲುವಿಗೆ ಅಗತ್ಯವಾದ ರಣತಂತ್ರ ರೂಪಿಸುತ್ತಾರೆ.ಕ್ಷೇತ್ರದ ಮಟ್ಟದಲ್ಲಿ ಆಂತರಿಕವಾಗಿ ಇರುವ ಭಿನ್ನಮತಗಳನ್ನು ಸರಿಪಡಿಸುತ್ತಾರೆ.ಅಸಮಾಧಾನಗೊಂಡವರನ್ನು ಸಮಾಧಾನಪಡಿಸುವ ಕೆಲಸ ಅವರಿಗೆ ಕರಗತವಾಗಿದೆ.ಡಿ.ಕೆ.ಶಿವಕುಮಾರ್ ಭರವಸೆ ಕೊಟ್ಟರೆ ಅದು ಈಡೇರುತ್ತದೆ ಎಂಬ ನಂಬಿಕೆ ಕಾಂಗ್ರೆಸಿಗರಲ್ಲಿ ಬಲವಾಗಿದೆ.ಹೀಗಾಗಿ ಅವರ ಮಾತಿಗೆ ಹೆಚ್ಚಿನ ಮನ್ನಣೆ ಸಿಗುತ್ತದೆ.

ಎಷ್ಟೇ ಬಂಡಾಯ, ಅತೃಪ್ತಿ, ಅಸಮಾಧಾನಗಳಿದ್ದರೂ ಅವುಗಳನ್ನು ನಿವಾರಿಸಿ ಪಕ್ಷ ಗೆಲ್ಲಿಸಲು ಸಾಮಾನ್ಯ ಕಾರ್ಯಕರ್ತರಂತೆ ಶ್ರಮ ವಹಿಸುತ್ತಾರೆ.ಜತೆಗೆ ಅವರು ಕಾಲಿಟ್ಟ ಕಡೆಗಳೆಲ್ಲಾ ಹೊಸ ನಾಯಕರನ್ನೂ ಸೃಷ್ಟಿಸುತ್ತಾರೆ ಎಂಬ ಮಾತುಗಳಿವೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಚುನಾವಣೆಯ ಉಸ್ತುವಾರಿ ನೀಡಬೇಕು ಎಂಬುದು ಕ್ಷೇತ್ರಗಳ ನಾಯಕರ ಒತ್ತಾಯ.

ಅನರ್ಹರಾಗಿರುವ ಶಾಸಕರು ಕಾಂಗ್ರೆಸ್‍ನಲ್ಲಿ ಹಿರಿಯ ಮುಖಂಡರಾಗಿದ್ದರು.ಅವರನ್ನು ಹೊರತುಪಡಿಸಿ ಪರ್ಯಾಯ ನಾಯಕತ್ವವೇ ಕ್ಷೇತ್ರಗಳಲ್ಲಿ ಬೆಳೆದಿಲ್ಲ. ಈಗ ಉಪ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟು ಮಂದಿ ಇದ್ದಾರೆ.ಆದರೆ, ಪ್ರಾಮಾಣಿಕವಾಗಿ ಕೆಲಸ ಮಾಡಿ ಪಕ್ಷ ಗೆಲ್ಲಿಸುವ ಮುಖಂಡರ ಕೊರತೆ ಇದೆ.ಇಂತಹ ಸಂದರ್ಭದಲ್ಲಿ ಆಕ್ರಮಣಕಾರಿ ನಾಯಕತ್ವ ಬಹಳ ಮುಖ್ಯ.ಕೆಳ ಹಂತದಲ್ಲಿ ಸಂಘಟನೆ ಮಾಡದ ಹೊರತು ಚುನಾವಣೆ ಎದುರಿಸಿದರೂ ಪ್ರಯೋಜನವಿಲ್ಲ. ವೇದಿಕೆಯಲ್ಲಿ ಭಾಷಣ ಮಾಡುವ ನಾಯಕರು ಮತ ತಂದು ಕೊಡುವುದಿಲ್ಲ. ನಾಯಕತ್ವದ ಹಮ್ಮು ಬಿಟ್ಟು ಹಗಲು-ರಾತ್ರಿ ಹಿರಿಯ ನಾಯಕರು ದುಡಿದಾಗ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಾಗುತ್ತದೆ.ಹೀಗಾಗಿ ಡಿ.ಕೆ.ಶಿವಕುಮಾರ್ ಅವರೇ ಸೂಕ್ತ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನ ಕೆ.ಆರ್.ಪುರಂ, ಯಶವಂತಪುರ, ಹೊಸಕೋಟೆ,  ಮಹಾಲಕ್ಷ್ಮಿಲೇಔಟ್, ಚಿಕ್ಕಬಳ್ಳಾಪುರ, ಬಳ್ಳಾರಿಯ ಹೊಸಪೇಟೆ ಕ್ಷೇತ್ರಗಳಿಗೆ ಡಿ.ಕೆ.ಶಿವಕುಮಾರ್ ಅವರೇ ಉಸ್ತುವಾರಿಯಾಗಬೇಕು ಎಂದು ಬಹಳಷ್ಟು ನಾಯಕರು ಬೇಡಿಕೆ ಮುಂದಿಟ್ಟಿದ್ದಾರೆ.

ಕೆಪಿಸಿಸಿ ಸುಪ್ರೀಂಕೋರ್ಟ್ ತೀರ್ಪು ಬರುವುದನ್ನು ಕಾಯುತ್ತಿದ್ದು, ಈವರೆಗೂ ಉಸ್ತುವಾರಿ ನಾಯಕರನ್ನು ನಿಯೋಜನೆ ಮಾಡಿಲ್ಲ. ಅಭ್ಯರ್ಥಿಗಳ ಆಯ್ಕೆ ಸಲುವಾಗಿ ನೇಮಿಸಲಾಗಿದ್ದ ವೀಕ್ಷಕರನ್ನೇ ಸದ್ಯದ ಪರಿಸ್ಥಿತಿಯಲ್ಲಿ ಉಸ್ತುವಾರಿಗಳೆಂದು ಹೇಳಲಾಗುತ್ತಿದೆ.ಅವರು ಕೂಡ ಪ್ರಾಮಾಣಿಕವಾಗಿ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಉಸ್ತುವಾರಿಗಳನ್ನು ಬದಲಾವಣೆ ಮಾಡಬೇಕು.ಡಿ.ಕೆ.ಶಿವಕುಮಾರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಬೇಕೆಂದು ಒತ್ತಡಗಳು ಹೆಚ್ಚಾಗಿವೆ. ಆದರೆ, ಇದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬಣ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಹೇಳಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ