ಬೆಂಗಳೂರು,ಅ.31-ಬ್ರಿಟಿಷರ ವಿರುದ್ಧ ಹೋರಾಡಿದ್ದ ಎನ್ನಲಾಗುತ್ತಿರುವ ಟಿಪ್ಪು ಸುಲ್ತಾನ್ ಅನೇಕ ವಿವಾದಗಳನ್ನು ಹೊಂದಿರುವ ವ್ಯಕ್ತಿ. ಹೀಗಾಗಿಯೇ ಪಠ್ಯ ಪುಸ್ತಕದಿಂದ ಆತನ ಇತಿಹಾಸವನ್ನು ಕೈಬಿಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸದಲ್ಲಿ ಟಿಪ್ಪು ವಿವಾದಾತ್ಮಕ ವ್ಯಕ್ತಿಯಾಗಿ ಉಳಿದಿರುವುದರಿಂದ ಮುಂದಿನ ಪೀಳಿಗೆ ಆತನ ಇತಿಹಾಸವನ್ನು ಓದಬಾರದು ಎಂಬ ಕಾರಣಕ್ಕೆ ಪಠ್ಯ ಪುಸ್ತಕದಿಂದ ಕೈ ಬಿಡಲು ಮುಂದಾಗಿದ್ದೇವೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಹಿಂದಿನ ಸರ್ಕಾರವೇ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿರಲಿಲ್ಲ. ಈ ಬಗ್ಗೆ ವಿರೋಧ ಪಕ್ಷದ ನಾಯಕರು ತಿಳಿದುಕೊಂಡು ಮಾತನಾಡುವುದು ಉತ್ತಮ.ಪ್ರಚಾರಕ್ಕಾಗಿ ಮಾತನಾಡಿದರೆ ಅದಕ್ಕೆ ಪ್ರತಿಕ್ರಿಯಿಸದಿರುವುದೇ ಉತ್ತಮ ಎಂದರು.
ಟಿಪ್ಪು ವಿಷಯವನ್ನು ಬಿಜೆಪಿಯವರು ಅಸ್ತ್ರವಾ ಬಳಸಿಕೊಳ್ಳಲಿದ್ದಾರೆ ಎಂಬ ಪ್ರತಿ ಪಕ್ಷದ ನಾಯಕ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ ಅವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನೆರೆ ಪೀಡಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ಅನೇಕರು ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಪರಿಹಾರವನ್ನು ನೀಡಿದ್ದೇವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಎಲ್ಲಿ ಅನ್ಯಾಯವಾಗಿದೆ ಎಂಬುದು ಗೊತ್ತಿಲ್ಲ. ಸರ್ಕಾರವೇ ಸತ್ತು ಹೋಗಿದೆ ಎಂದು ಹೇಳುವ ಅವರು ಅಧಿಕಾರ ಕಳೆದುಕೊಂಡಿರುವ ನೋವಿನಲ್ಲಿ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು ಔರಾದ್ಕರ್ ವರದಿ ಅನುಷ್ಠಾನವಾಗದೇ ಇರುವುದಕ್ಕೆ ಪೆÇಲೀಸ್ ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಇದು ಕಾರಣಾಂತರಗಳಿಂದ ಅನುಷ್ಠಾನವಾಗಲು ವಿಳಂಬವಾಗಿದೆ. ಕಾನೂನಿನ ಪ್ರಕಾರ ಅನುಷ್ಠಾನ ಮಾಡಲಿದ್ದಾರೆ.ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಮನವಿ ಮಾಡಿದರು.
ಪೆÇಲೀಸ್ ಸಿಬ್ಬಂದಿಯ ಮೂಲ ವೇತನ ಕಡಿಮೆ ಇರುವ ಕಾರಣ ಔರಾದ್ಕರ್ ಸಮಿತಿ ರಚನೆ ಮಾಡಲಾಗಿದೆ.ಈ ಸಮಿತಿಯು ಇನ್ನೊಂದು ವರದಿ ನೀಡುವ ಸಾಧ್ಯತೆ ಇದೆ.ಕೂಡಲೇ ಕಾನೂನು ಬದ್ಧವಾಗಿಯೇ ಅನುಷ್ಠಾನ ಮಾಡುತ್ತೇವೆ.
ಎಲ್ಲ ಇಲಾಖೆಗೂ ಒಂದೇ ಕಾನೂನು ಇದೆ.ಅದೇ ರೀತಿ ಒಂದೇ ಮಾದರಿಯ ಸಂಬಳವನ್ನು ತರಬೇಕೆಂಬುದು ನಮ್ಮ ಉದ್ದೇಶ. ಇದರಲ್ಲಿ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೂಲ ವೇತನದಲ್ಲೇ ಅನ್ಯಾಯವಾಗಿರುವುದರಿಂದ ಹಳ ಬರಿಗಾಗಲಿ ಇಲ್ಲವೇ ಹೊಸಬರಿಗಾಗಲಿ ಅನ್ಯಾಯವಾಗಲು ಬಿಡುವುದಿಲ್ಲ. ಹಣಕಾಸು ಇಲಾಖೆ ಕೂಡ ಎಲ್ಲರಿಗೂ ಒಂದೇ ರೀತಿಯ ವೇತನ ಇರಬೇಕೆಂದು ಸಲಹೆ ಮಾಡಿತ್ತು. ಹೀಗಾಗಿಯೇ ತುಸು ವಿಳಂಬವಾಗಿದೆ. ಆದಷ್ಟು ಶೀಘ್ರದಲ್ಲಿ ಈ ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿ ಹೇಳಿದರು.