ಬೆಂಗಳೂರು,ಅ.25-ಜೀವ ಜಲವಾದ ನೀರನ್ನು ಹಿತಮಿತವಾಗಿ ಬಳಸಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಮನವಿ ಮಾಡಿಕೊಂಡರು.
ಗಣೇಶಮಂದಿರ ವಾರ್ಡ್ನಲ್ಲಿ ನಿರ್ಮಿಸಲಾಗಿರುವ ಕಾವೇರಿ ಮಾತೆ ಕಂಚಿನ ಪುತ್ಥಳಿ, ಸಾಮ್ರಾಟ್ ಬಾಡ್ಮಿಂಟನ್ ಅರೇನಾ ಮತ್ತು ವ್ಯಾಯಾಮ ಶಾಲೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ನೀರು ಪ್ರತಿಯೊಬ್ಬರಿಗೂ ಅತ್ಯವಶ್ಯಕ.ಇಂತಹ ನೀರನ್ನು ಹಿತಮಿತವಾಗಿ ಬಳಸಬೇಕು.ಇದರ ದ್ಯೋತಕವಾಗಿ ಕಾವೇರಿ ಮಾತೆಯ ಪುತ್ಥಳಿ ಅನಾವರಣ ಮಾಡಲಾಗಿದೆ ಎಂದರು.
ಮನುಷ್ಯ ಆರೋಗ್ಯವಾಗಿರಬೇಕಾದರೆ ವ್ಯಾಯಾಮ ಅತ್ಯವಶ್ಯಕ.ಹೀಗಾಗಿ ಗಣೇಶಮಂದಿರ ವಾರ್ಡ್ನಲ್ಲಿ ಒಳಾಂಗಣ ಬಾಡ್ಮಿಂಟನ್ ಕ್ರೀಡಾಂಗಣ ಹಾಗೂ ಜಿಮ್ ಲೋಕಾರ್ಪಣೆ ಮಾಡಲಾಗಿದೆ.ಸಾರ್ವಜನಿಕರು ಬಿಬಿಎಂಪಿಯ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಸ್ಥಳೀಯ ಪಾಲಿಕೆ ಸದಸ್ಯೆ ಲಕ್ಷ್ಮಿ ಉಮೇಶ್ ಮಾತನಾಡಿ, ಸ್ವಚ್ಛತೆ, ಆರೋಗ್ಯ, ಕ್ರೀಡೆ ಹಾಗೂ ಪರಿಸರದ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದ ವಾರ್ಡ್ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಸದ ತೇಜಸ್ವಿ ಸೂರ್ಯ , ಶಾಸಕ ಕೃಷ್ಣಪ್ಪ , ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಉಪಮೇಯರ್ ಮೋಹನ್ರಾಜ್, ಬಿಜೆಪಿ ಮುಖಂಡ ಕಬ್ಬಾಳು ಉಮೇಶ್ ಮತ್ತಿತರರು ಹಾಜರಿದ್ದರು.