ಅನರ್ಹ ಶಾಸಕರಿಗೆ ಬರಸಿಡಿಲಿನಂತೆ ಅಪ್ಪಳಿಸಿದ ಎರಡು ರಾಜ್ಯಗಳ ಫಲಿತಾಂಶ

 

ಬೆಂಗಳೂರು,ಅ.25-ಇನ್ನೇನು ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದೇ ಬರುತ್ತದೆ ಎಂದು ಭಾರೀ ವಿಶ್ವಾಸದಲ್ಲಿದ್ದ ಅನರ್ಹ ಶಾಸಕರಿಗೆ ಎರಡು ರಾಜ್ಯಗಳ ಫಲಿತಾಂಶ ಬರಸಿಡಿಲಿನಂತೆ ಅಪ್ಪಳಿಸಿದೆ.

ಏಕೆಂದರೆ ಮಹಾರಾಷ್ಟ್ರ , ಹರಿಯಾಣ, ಗುಜರಾತ್ ಸೇರಿದಂತೆ  ಇತರೆ ರಾಜ್ಯಗಳಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಪಕ್ಷಾಂತರಿಗಳು ಮತದಾರರಿಂದ ತಿರಸ್ಕøತಗೊಂಡಿದ್ದಾರೆ.

ಇದು ಡಿ.5ರಂದು ರಾಜ್ಯದಲ್ಲಿ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹಗೊಂಡ ಶಾಸಕರು ನ್ಯಾಯಾಲಯವು ಸ್ಪೀಕರ್ ಆದೇಶವನ್ನು ಅನೂರ್ಜಿತಗೊಳಿಸುತ್ತದೆ ಎಂದುಕೊಂಡು ಗರಿಗರಿಯಾದ ಖಾದಿ ಬಟ್ಟೆ ಧರಿಸಿ ಗೂಟದ ಕಾರು ಏರುವ  ತವಕದಲ್ಲಿದ್ದರು.

ಆದರೆ ನೆರೆಯ ಮಹಾರಾಷ್ಟ್ರದಲ್ಲಿ ಪಕ್ಷಾಂತರಿಗಳಿಗೆ ಅಲ್ಲಿನ ಮತದಾರರು ಸಾರಾಸಗಟಾಗಿ ತಿರಸ್ಕರಿಸಿರುವುದು ಅನರ್ಹರನ್ನು ಗಲಿಬಿಲಿಗೊಳಿಸಿದೆ.

ಕರ್ನಾಟಕ ಗಡಿಭಾಗಕ್ಕೆ ಹೊಂದಿಕೊಂಡಿರುವ ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ ,ದಾಂದೇಡ್  ಮತ್ತಿತರ ಕಡೆ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.

ಇದೀಗ ನ್ಯಾಯಾಲಯ ಸ್ಪೀಕರ್ ಆದೇಶವನ್ನು ಅನೂರ್ಜಿತಗೊಳಿಸಿ ರಾಜೀನಾಮೆ ನೀಡಿರುವುದನ್ನು ಎತ್ತಿ ಹಿಡಿದರೂ ಉಪಚುನಾವಣೆ ಎದುರಾಗುತ್ತದೆ.

ಆದರೂ ಬಿಜೆಪಿಯೊಳಗೆ ಇವರನ್ನು ರತ್ನಗಂಬಳಿ ಹಾಕಿ ಸ್ವಾಗತಿಸುವವರು ಇಲ್ಲದಿರುವುದು ಮತ್ತೊಂದು ತಲೆ ನೋವು ತಂದಿದೆ.

ಹುಣಸೂರು, ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರ ಹೊರತುಪಡಿಸಿದರೆ ಉಳಿದ ಹನ್ನೆರಡು ಕ್ಷೇತ್ರಗಳಲ್ಲಿ ಈಗಲೂ ಅನರ್ಹರಿಗೆ ಟಿಕೆಟ್ ನೀಡುವುದರ ಬಗ್ಗೆ ಗೊಂದಲವಿದೆ.

ಅದರಲ್ಲೂ ಹೊಸಕೋಟೆ, ಶಿವಾಜಿನಗರ, ಕೆ.ಆರ್.ಪುರಂ, ಮಹಾಲಕ್ಷ್ಮಿ ಲೇಔಟ್, ಮಸ್ಕಿ, ಅಥಣಿ, ಗೋಕಾಕ್, ಕಾಗವಾಡ ಕ್ಷೇತ್ರಗಳಲ್ಲಿ  ಅನರ್ಹರಿಗೆ ಟಿಕೆಟ್ ನೀಡಲು  ಮೂಲ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.

ಇವರನ್ನು ಸಮಾಧಾನಪಡಿಸಲು ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು.ಆದರೆ ಒಂದಿಬ್ಬರನ್ನು ಹೊರತುಪಡಿಸಿದರೆ ಉಳಿದವರು ಅಧಿಕಾರವನ್ನೇ ಸ್ವೀಕರಿಸಿಲ್ಲ.

ಕೊನೆ ಕ್ಷಣದವರೆಗೂ ಬಿಜೆಪಿಯಿಂದಲೇ ಟಿಕೆಟ್ ಪಡೆದು ಮತ್ತೊಂದು ಬಾರಿ  ಉಪಚುನಾವನೆಯನ್ನು  ಎದುರಿಸಲು ಸಜ್ಜಾಗಿದ್ದಾರೆ. ಆದರೆ ಹೆಜ್ಜೆ ಹೆಜ್ಜೆಗೂ ಒಂದಿಲ್ಲೊಂದು ಆತಂಕಗಳು ಎದುರಾಗುತ್ತಲೇ ಇರುವುದರಿಂದ ಅವರ ಎದೆಬಡಿತ ಜೋರಾಗಿದೆ.

ಅಲ್ಲದೆ ಆಗೋ ಹೀಗೊ ಬಿಜೆಪಿ ಮುಖಂಡರು ಒಪ್ಪಿ ತಮ್ಮ ಪಕ್ಷದಲ್ಲಿರುವವರನ್ನು ಒಪ್ಪಿಸಿ ತಮಗೆ ಟಿಕೆಟ್ ನೀಡಿದರೆ ಮತದಾರರು ಒಪ್ಪಿ  ಪುನಃ ಆಯ್ಕೆ ಮಾಡುವರೇ? ಇಲ್ಲವೇ ತಿರಸ್ಕರಿಸುವರೇ?ಎಂಬ ಆತಂಕದಲ್ಲಿದ್ದಾರೆ.

ಇನ್ನೊಂದೆಡೆ ನ್ಯಾಯಾಲಯ ಕೂಡ ಪ್ರಕರಣವನ್ನು ಇತ್ಯರ್ಥಗೊಳಿಸುತ್ತಿಲ್ಲ.ನ.11ರಂದು ನೀತಿ ಸಂಹಿತೆ ಜಾರಿಯಾಗಲಿದೆ. ಅಷ್ಟರೊಳಗೆ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ  ವಿಚಾರಣೆ ಮುಕ್ತಾಯಗೊಂಡು ಏನಾದರೊಂದು ತೀರ್ಪು ಹೊರಬರಲೇಬೇಕಿದೆ.

ಹೀಗೆ ಪ್ರತಿ ಹಂತದಲ್ಲೂ  ಒಂದಿಲ್ಲೊಂದು ಆತಂಕಗಳು, ಅಡೆತಡೆಗಳು ಎದುರಾಗುತ್ತಿರುವುದರಿಂದ ಉಪಚುನಾವಣೆಯಲ್ಲಿ ಏನಾಗುತ್ತದೆಯೋ ಎಂಬ ಆತಂಕ ಮನೆ ಮಾಡಿದೆ.

ಬಿಜೆಪಿಯನ್ನು ನಂಬಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆವು. ಮುಖ್ಯಮಂತ್ರಿ ಯಡಿಯೂರಪ್ಪನವರ  ಪ್ರಭಾವ ಪಕ್ಷದೊಳಗೆ ಬೀರದಂತೆ ದೆಹಲಿ ನಾಯಕರೊಬ್ಬರ ಅಣತಿಯಂತೆ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ.

ಪಕ್ಷದಲ್ಲಿ  ದಿನದಿಂದ ದಿನಕ್ಕೆ ಬಿಎಸ್‍ವೈ ಅವರ ಹಿಡಿತ ತಪ್ಪುತ್ತಿರುವುದು, ಮತ್ತೊಂದೆಡೆ ಟಿಕೆಟ್ ಖಾತರಿ ಇಲ್ಲದಿರುವುದು  ನ್ಯಾಯಾಲಯದಲ್ಲಿ ಅರ್ಜಿ ಇತ್ಯರ್ಥಗೊಳ್ಳದಿರುವುದು, ಅನರ್ಹರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ