ಬೆಂಗಳೂರು, ಅ.25- ಯಡಿಯೂರು ವಾರ್ಡ್‍ನಲ್ಲಿ ವೈಟ್ ಟಾಪಿಂಗ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೇವಲ ಇಬ್ಬರು ಗುತ್ತಿಗೆದಾರರಿಗೆ ನೀಡಿದ್ದಾರೆಂಬ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಬಿಜೆಪಿ ಮುಖಂಡರು ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಆಗಿರುವ ಬೃಹತ್ ಪ್ರಮಾಣದ ಅವ್ಯವಹಾರ ಕುರಿತು ಸೂಕ್ತ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು 3900 ಪುಟಗಳ ದಾಖಲೆ ಬಿಡುಗಡೆ ಮಾಡಿದ ಮಾಜಿ ಉಪಮೇಯರ್ ಎಸ್.ಹರೀಶ್, ಬಿಜೆಪಿ ವಕ್ತಾರ ಎನ್.ಆರ್.ರಮೇಶ್, ಮುಖಂಡರಾದ ಅಶ್ವತ್ಥ ನಾರಾಯಣ್, ಶಾಂತಕುಮಾರ್ 2010 ರಿಂದ 2020ರ ವರೆಗೆ ಯಡಿಯೂರು ವಾರ್ಡ್‍ನಲ್ಲಿ ಒಟ್ಟು 143 ಮಂದಿ ಗುತ್ತಿಗೆದಾರರು ಕಾಮಗಾರಿ ಮಾಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಉಗ್ರಪ್ಪ ಅವರು ಕೇವಲ ಇಬ್ಬರು ಗುತ್ತಿಗೆದಾರರು ಕಾಮಗಾರಿ ಮಾಡಿದ್ದಾರೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾದುದು ಎಂದು ತಿಳಿಸಿದರು.
ಸಿದ್ಧರಾಮಯ್ಯನವರ ಸರ್ಕಾರ 2016-17ರಲ್ಲಿ ವೈಟ್ ಟಾಪಿಂಗ್ ಯೋಜನೆಯ ಅನುಷ್ಠಾನಕ್ಕೆ ಚಾಲನೆ ನೀಡಿತ್ತು. ಒಂದನೆ ಹಂತದಲ್ಲಿ 2 ಪ್ಯಾಕೇಜ್‍ಗಳ ಮೂಲಕ 93.47 ಕಿ.ಮೀ. ಉದ್ದದ 29 ರಸ್ತೆಗಳ ಅಭಿವೃದ್ಧಿಗೆಂದು 972.68 ಕೋಟಿ ಶೇ. 18 ಜಿಎಸ್‍ಟಿಯೊಂದಿಗೆ ಒಟ್ಟು ಮೊತ್ತ 1,148 ಕೋಟಿಗಳಿಗೆ ಏರಿಕೆಯಾಗಿದೆ.
ಸರಾಸರಿ ಪ್ರತಿ ಕಿ.ಮೀ. ಗೆ 12.28 ಕೋಟಿಯಂತೆ ಎರಡನೆ ಹಂತದಲ್ಲಿ 8 ಪ್ಯಾಕೇಜ್‍ಗಳ ಮೂಲಕ 62.80 ಕಿ.ಮೀ. ಉದ್ದದ 41 ರಸ್ತೆಗಳ ಅಭಿವೃದ್ಧಿಗೆ 759 ಕೋಟಿ, ಮೂರನೆ ಹಂತದಲ್ಲಿ 123 ಕಿ.ಮೀ. ಉದ್ದದ 89 ರಸ್ತೆಗಳ ಅಭಿವೃದ್ಧಿಗೆ 1,139 ಕೋಟಿ ಮೀಸಲಿಟ್ಟು ವೈಟ್ ಟಾಪಿಂಗ್ ಯೋಜನೆಯ ಹೆಸರಿನಲ್ಲಿ ಅಪಾರ ಪ್ರಮಾಣದ ಹಣ ದುರ್ಬಳಕೆಯಾಗಿದೆ. ಈ ಕುರಿತು ದೂರು ದಾಖಲಾಗಿದೆ ಎಂದು ದೂರಿದರು.
ಆಗಸ್ಟ್ 14ರಂದು ಒಂದು ಮತ್ತು ಎರಡನೆ ಹಂತದ ಕಾಮಗಾರಿಗಳ ಸಮಗ್ರ ತನಿಖೆಗೆ ಹಾಗೂ ಮೂರನೆ ಹಂತದ ಕಾಮಗಾರಿಗಳನ್ನು ರದ್ದುಗೊಳಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆದೇಶಿಸಿ ಈ ಹಗರಣದ ತನಿಖೆಯನ್ನು ಕ್ಯಾಪ್ಟನ್ ದೊಡ್ಡಿಹಾಳ್ ನೇತೃತ್ವದ ತಂಡಕ್ಕೆ ವಹಿಸಲಾಗಿದೆ ಎಂದು ತಿಳಿಸಿದರು.
ವೈಟ್ ಟಾಪಿಂಗ್ ಹೆಸರಿನಲ್ಲಿ ನೂರಾರು ಕೋಟಿ ವಂಚನೆಯಾಗಿರುವುದನ್ನು ಪ್ರತ್ಯಕ್ಷವಾಗಿ ನಿರೂಪಿಸುವುದಕ್ಕಾಗಿಯೇ ಪ್ರಾಯೋಗಿಕವಾಗಿ ನಗರದ ಮೂರು ರಸ್ತೆಗಳಲ್ಲಿ ವಾಸ್ತವ ವೆಚ್ಚದಲ್ಲಿ ಮಾಡಿ ತೋರಿಸಲು ನಿರ್ಧರಿಸಿದೆವು. ಪೈಲೆಟ್ ಪ್ರಾಜೆಕ್ಟ್ ರೀತಿಯಲ್ಲಿ ಈ ಮೂರು ರಸ್ತೆಗಳ ಕಾಮಗಾರಿಗಳನ್ನು ನಿರ್ವಹಿಸಲು ಸರ್ಕಾರ ನಿರ್ಧರಿಸಿ ಯಡಿಯೂರು ವಾರ್ಡ್‍ನ ಒಂದು ರಸ್ತೆ, ಶಾಕಾಂಬರಿನಗರ – ಕೆರೇಸಂದ್ರ ವಾರ್ಡ್‍ನ ಒಂದು ರಸ್ತೆ ಮತ್ತು ಯಲಹಂಕ ಕ್ಷೇತ್ರದ ಒಂದು ರಸ್ತೆಯನ್ನು ಕಡಿಮೆ ವೆಚ್ಚದಲ್ಲಿ ವೈಟ್ ಟಾಪಿಂಗ್ ರಸ್ತೆಯನ್ನಾಗಿ ನಿರ್ಮಿಸಲು ನಿರ್ಧರಿಸಲಾಯಿತು.
ಸಿದ್ದರಾಮಯ್ಯ ಮತ್ತು ಕೆ.ಜೆ.ಜಾರ್ಜ್ ಜೋಡಿ ಜಾರಿಗೆ ತಂದಿರುವ ಹಲವಾರು ಯೋಜನೆಗಳಿಗೆ ಪರ್ಯಾಯವಾಗಿ ಕಡಿಮೆ ಮೊತ್ತದಲ್ಲಿ ನಾವು ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಿ ತೋರಿಸಿದ್ದೇವೆ. ಟೆಂಡರ್ ಶೂರ್ ರಸ್ತೆಗಳಿಗೆ ಕಿ.ಮೀ. ಒಂದಕ್ಕೆ 12 ಕೋಟಿಗಳಂತೆ ವೆಚ್ಚ ಮಾಡಲಾಗಿತ್ತು. ಆದರೆ, ಅದಕ್ಕೂ ಹತ್ತು ಪಟ್ಟು ಅತ್ಯುತ್ತಮ ಮಾದರಿ ರಸ್ತೆಗಳನ್ನು ಕಿ.ಮೀ. ಒಂದಕ್ಕೆ ಕೇವಲ 90 ಲಕ್ಷ ರೂ.ಮೊತ್ತದಲ್ಲಿ ನಮ್ಮ ಸರ್ಕಾರ ಮಾಡಿ ತೋರಿಸಿದೆ ಎಂದು ಹೇಳಿದರು.
28.5 ಲಕ್ಷ ಮೊತ್ತದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್‍ಗಳಿಗೆ ಪರ್ಯಾಯವಾಗಿ ಅದೇ ತಂತ್ರe್ಞÁನದೊಂದಿಗೆ ಕೇವಲ 9 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿದೆ.
ದಿನೇಶ್ ಗುಂಡೂರಾವ್ ಶಾಸಕರಾಗಿರುವ ಗಾಂಧಿನಗರ ಕ್ಷೇತ್ರದಲ್ಲಿ 3.15 ಕಿ.ಮೀ. ಉದ್ದದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಲು 47.80 ಕೋಟಿ ಮೊತ್ತದ ಟೆಂಡರ್‍ಗೆ ಅನುಮೋದನೆ ನೀಡಲಾಗಿದೆ. ಕಿ.ಮೀ. ಒಂದಕ್ಕೆ 15.17 ಕೋಟಿಗಳಂತೆ ಮೆಸರ್ಸ್ ಅಮೃತ್ ಕನ್‍ಸ್ಟ್ರಕ್ಷನ್ ಸಂಸ್ಥೆಗೆ ಕಾರ್ಯಾದೇಶ ಪತ್ರ ನೀಡಲಾಗಿದೆ. ಗಾಂಧಿನಗರ ಕ್ಷೇತ್ರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಅತ್ಯಂತ ಕಳಪೆ ಗುಣಮಟ್ಟಗಳಿಂದ ಕೂಡಿದೆ ಎಂದು ದೂರಿದರು.
ಇಲ್ಲಿ ದಿನೇಶ್ ಗುಂಡೂರಾವ್ ದೊಡ್ಡ ಮಟ್ಟದ ಕಿಕ್‍ಬ್ಯಾಕ್ ಪಡೆದಿದ್ದಾರೆ.ಕನಿಷ್ಟ 30 ಕೋಟಿ ರೂ.ಗಳನ್ನು ದೋಚಲಾಗಿದೆ ಎಂದು ಹೇಳಿದರು.
ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾಗಿರುವ ಅಬ್ದುಲ್ ವಾಜಿದ್ ಅವರು ಮೆಕ್ಯಾನಿಕಲ್ ಸ್ವೀಪರ್ ಮೆಷಿನ್‍ಗಳ ಗುತ್ತಿಗೆಗೆ ಸಂಬಂಧಪಟ್ಟ ವಿಷಯವನ್ನು ಒಂದು ವರ್ಷದಿಂದ ಮುಂದಕ್ಕೆ ಹಾಕುತ್ತಲೇ ಇದ್ದಾರೆ. ಕಡಿಮೆ ಮೊತ್ತ ನಮೂದಿಸಿರುವ ಗಾರ್ಬೇಜ್ ಮಾಫಿಯಾದ ಗುತ್ತಿಗೆದಾರರ ಹಿತ ಕಾಯಲು ಮುಂದಕ್ಕೆ ಹಾಕಲಾಗುತ್ತಿದೆ.ಗುತ್ತಿಗೆ ದಾರರಿಂದ ಅಬ್ದುಲ್ ವಾಜೀದ್ ಕೋಟ್ಯಂತರ ರೂ. ಕಮಿಷನ್ ಪಡೆದು ವಿಷಯದ ಅನುಮೋದನೆಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಎನ್.ಆರ್.ರಮೇಶ್ ಆರೋಪಿಸಿದರು.
ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್ ಅಥವಾ ಉಗ್ರಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕರಾಗಲಿ, 14,600 ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಕಾರ್ಯಗಳ ಹಗರಣವನ್ನು ಸಿಬಿಐಗೆ ಅಥವಾ ಸಿಐಡಿಗೆ ವಹಿಸುವಂತೆ ಬಹಿರಂಗ ಪತ್ರ ಬರೆಯಲು ಸಿದ್ಧರಿದ್ದಾರೆಯೇ ಎಂದು ಬಿಜೆಪಿ ಮುಖಂಡರು ಸವಾಲು ಹಾಕಿದರು.