ಚಂಡೀಗಢ: ಹರ್ಯಾಣದ ವಿಧಾನಸಭಾ ಫಲಿತಾಂಶ ಕ್ಷಣಕ್ಷಣ ಕುತೂಹಲ ಮೂಡಿಸುತ್ತಿದ್ದು ಬಿಜೆಪಿ, ಕಾಂಗ್ರೆಸ್ ಮಧ್ಯೆ ಸಮಬಲದ ಹೋರಾಟ ನಡೆಯುತ್ತಿದೆ.
ಮತ ಎಣಿಕೆಯ ಆರಂಭದ ಒಂದು ಗಂಟೆಯವರೆಗೆ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಆದರೆ ನಂತರ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು ಬೆಳಗ್ಗೆ 9:30ರ ವೇಳೆಗೆ ಸಮಬಲದ ಹೋರಾಟ ಕಾಣುತ್ತಿದೆ.
ದುಷ್ಯಂತ್ ಸಿಂಗ್ ಚೌತಾಲಾ ಅವರ ಜನನಾಯಕ್ ಜನತಾ ಪಕ್ಷ (ಜೆಜೆಪಿ) 8 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವುದರ ಜೊತೆ ಒಟ್ಟು 14 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದರಿಂದ ಫಲಿತಾಂಶ ದಿಢೀರ್ ತಿರುವು ಪಡೆದುಕೊಳ್ಳುತ್ತಿದೆ. ಈಗ ಬಿಜೆಪಿ 40, ಕಾಂಗ್ರೆಸ್ 36, ಇತರರು 14 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ.
ಪಕ್ಷದ ಅಭ್ಯರ್ಥಿಗಳು ಮುನ್ನಡೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ದುಷ್ಯಂತ್ ಸಿಂಗ್ ಚೌತಾಲಾ ಪ್ರತಿಕ್ರಿಯಿಸಿ ಕಾಂಗ್ರೆಸ್, ಬಿಜೆಪಿ ಪೈಕಿ ಯಾರೇ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ನಾವೇ ನಿರ್ಣಯಕರು ಎಂದು ಹೇಳಿದ್ದಾರೆ.
2014ರ ಹರ್ಯಾಣ ಚುನಾವಣೆಯ ಒಟ್ಟು 90 ಸ್ಥಾನಗಳಲ್ಲಿ 47 ಸ್ಥಾನಗಳನ್ನು ಬಿಜೆಪಿ ಜಯಗಳಿಸುವ ಮೂಲಕ ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದರು. ಓಂ ಪ್ರಕಾಶ್ ಚೌಟಾಲ ನೇತೃತ್ವದ ಇಂಡಿಯನ್ ನ್ಯಾಷನಲ್ ಲೋಕ ದಳ 19, ಕಾಂಗ್ರೆಸ್ 15 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಎಲ್ಲ 10 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು.