ಹರಿಯಾಣ ಅತಂತ್ರ ಫಲಿತಾಂಶ; ಚೌಟಾಲಾಗೆ ಸಿಎಂ ಸ್ಥಾನ ಆಫರ್​ ಕೊಟ್ಟ ಕಾಂಗ್ರೆಸ್​, ಕರ್ನಾಟಕ ಮಾದರಿ ಮೈತ್ರಿ ಸಾಧ್ಯತೆ?

ಚಂಡೀಗಢ ; ದೇಶದಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಹರಿಯಾಣ ಫಲಿತಾಂಶ ಅತಂತ್ರವಾಗುವ ಎಲ್ಲಾ ಲಕ್ಷಣಗಳು ಗೋಚರಿಸಿದ್ದು, ರಾಜ್ಯದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಕರ್ನಾಟಕ ಮಾದರಿ ಮೈತ್ರಿ ಸರ್ಕಾರಕ್ಕೆ ಈಗಾಗಲೇ ಕಸರತ್ತು ಆರಂಭಿಸಿದೆ.

90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹರಿಯಾಣದಲ್ಲಿ ಸರ್ಕಾರ ರಚನೆ ಮಾಡಲು 46 ಮ್ಯಾಜಿಕ್ ನಂಬರ್. ಆದರೆ, ಈವರೆಗೆ ಬಿಜೆಪಿ 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್​ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯುವುದು ಅಸಾಧ್ಯ ಎಂಬುದು ಸ್ಪಷ್ಟವಾಗಿದೆ.

ಆದರೆ, ಈ ನಡುವೆ ಹರಿಯಾಣ ರಾಜ್ಯದ ಪ್ರಬಲ ಪ್ರಾದೇಶಿಕ ಪಕ್ಷವಾದ ಜನನಾಯಕ ಜನತಾ ಪಾರ್ಟಿ 11 ಸ್ಥಾನದಲ್ಲಿ ಮುನ್ನಡೆ ಸಾಧಿಸುವ ಮೂಲಕ ತನ್ನ ಅಸ್ಥಿತ್ವವನ್ನು ಕಾಯ್ದುಕೊಂಡಿದೆ. ಹೀಗಾಗಿ ಜೆಜೆಪಿ ಪಕ್ಷ ಯಾರಿಗೆ ತನ್ನ ಬೆಂಬಲ ಘೋಷಿಸುತ್ತೋ  ಆ ಪಕ್ಷ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಕರ್ನಾಟಕ ಮಾದರಿ ಮೈತ್ರಿಗೆ ಕೈಕಸರತ್ತು
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸೋಲುಂಡಿದ್ದ ಕಾಂಗ್ರೆಸ್​ ಮೈತ್ರಿ ಸರ್ಕಾರ ರಚನೆ ಮಾಡುವ ಸಲುವಾಗಿ ಸಿಎಂ ಸ್ಥಾನವನ್ನು ಜೆಡಿಎಸ್​ ಪಕ್ಷಕ್ಕೆ ಬಿಟ್ಟು ಕೊಟ್ಟಿತ್ತು. ಪ್ರಸ್ತುತ ಹರಿಯಾಣದಲ್ಲೂ ಕಾಂಗ್ರೆಸ್​ ಹೈಕಮಾಂಡ್​ ಅದೇ ರೀತಿಯ ರಣತಂತ್ರವನ್ನು ಪಾಲಿಸಲು ಮುಂದಾಗಿದೆ.

ಈಗಾಗಲೇ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಅಸಾಧ್ಯ ಎಂಬುದು ತಿಳಿಯುತ್ತಿದ್ದಂತೆ ರಾಜಕೀಯ ಚದುರಂಗದ ಆಟಕ್ಕೆ ಮುಂದಾಗಿರುವ ಕಾಂಗ್ರೆಸ್​ ಸ್ಥಳೀಯ ಜೆಜೆಪಿ ಪಕ್ಷದ ಮುಖ್ಯಸ್ಥ ದುಷ್ಯಂತ್ ಚೌಟಾಲ ಅವರಿಗೆ ಸಿಎಂ ಸ್ಥಾನ ನೀಡುವ ಭರವಸೆ ನೀಡಿ ಮೈತ್ರಿ ಸಾಧಿಸಲು ಮುಂದಾಗಿದೆ.

ಬಿಜೆಪಿ ಸಹ ಬಹಿರಂಗ ಹೇಳಿಕೆ ನೀಡಿದ್ದು ಜೆಜೆಪಿ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಸಾಧಿಸಲು ಮುಂದಾದರೆ ದುಷ್ಯಂತ್ ಚೌಟಾಲ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದೆ. ಆದರೆ, ಈಗಾಗಲೇ ಮೈತ್ರಿ ಕುರಿತು ಸ್ಪಷ್ಟನೆ ನೀಡಿರುವ ದುಷ್ಯಂತ್​ ಚೌಟಾಲ ತಾನು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಮೈತ್ರಿ ಸಾಧಿಸುವುದಿಲ್ಲ ಎಂದಿರುವುದು ರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಕಾಂಗ್ರೆಸ್​-ಜೆಜೆಪಿ ಮೈತ್ರಿ ಸಾಧಿಸುವುದು ಬಹುತೇಕ ಖಚಿತ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಅಕ್ಟೋಬರ್​ 21ರ ಚುನಾವಣೆ ನಂತರ ದೇಶದದ ಎಲ್ಲಾ ಪ್ರಮುಖ ಮತಗಟ್ಟೆಗಳು ಈ ಬಾರಿಯೂ ಹರಿಯಾಣದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ, ಮನೋಹರ್​ ಲಾಲ್ ಕಟ್ಟರ್​ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಭವಿಷ್ಯ ನುಡಿದಿತ್ತು. ಆದರೆ, ಈ ಎಲ್ಲಾ ಸಮೀಕ್ಷೆಗಳನ್ನು ಹರಿಯಾಣ ಮತದಾರ ಸುಳ್ಳು ಮಾಡಿದ್ದಾನೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ