ಸೇನೆ ಯಶಸ್ವಿ ಕಾರ್ಯಾಚರಣೆ: ಝಾಕಿರ್ ಮೂಸಾ ಉತ್ತರಾಧಿಕಾರಿ ಲೆಲ್ಹಾರಿ ಸೇರಿ 3 ಉಗ್ರರ ಹತ್ಯೆ

ಶ್ರೀನಗರ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನಾಪಡೆ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ತ್ರಾಲ್ ನಲ್ಲಿ ನಡೆದ ಎನ್’ಕೌಂಟರ್ ನಲ್ಲಿ ಝಾಕಿರ್ ಮೂಸಾ ಉತ್ತರಾಧಿಕಾರಿ ಹಾಗೂ ಅನ್ಸರ್ ಘಜ್ವತ್ ಉಲ್ ಹಿಂದ (ಎಜಿಹೆಚ್) ಮುಖ್ಯಸ್ಥ ಅಬ್ದುಲ್ ಹಮೀದ್ ಲೆಲ್ಹಾರಿ ಸೇರಿದಂತೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ.

ಹತ್ಯೆಯಾಗಿರುವ ಉಗ್ರ ಲೆಲ್ಹಾರಿ ಪುಲ್ವಾಮಾ ನಿವಾಸಿಯಾಗಿದ್ದು, ಮೇ.23ರಂದು ಝಾಕಿರ್ ಮೂಸೂ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಬಳಿಕ ಎಜಿಹೆಚ್ ಸಂಘಟನೆಯ ಮುಖ್ಯಸ್ಥನಾಗಿದ್ದ.

ಕಾರ್ಯಾಚರಣೆಯಲ್ಲಿ ನವೀದ್ ಟಕ್, ಜುನೈದ್ ಭಟ್ ಎಂಬ ಮತ್ತಿಬ್ಬರು ಉಗ್ರರರನ್ನೂ ಸೇನಾಪಡೆ ಹತ್ಯೆ ಮಾಡಿದೆ. ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳನ್ನು ಸೇನೆ ವಶಪಡಿಸಿಕೊಂಡಿದೆ.

ಹತ್ಯೆಯಾದ ಮೂವರೂ ಉಗ್ರರನ್ನು ಅವಂತಿಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2019ರ ಮೇ ತಿಂಗಳಿನಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಅಲ್’ಖೈದಾ ಶಾಖೆಯ ಮುಖ್ಯಸ್ಥ, ಉಗ್ರ ಝಾಕಿರ್ ಮೂಸಾ ಬಲಿಯಾಗಿದ್ದ. ಬಳಿಕ ಅಲ್ ಖೈದಾ ನಿಕಟವರ್ತಿ ಸಂಘಟನೆಯಾದ ಅನ್ಸಾರ್ ಘಾಝ್ವಾತ್ ವುಲ್ ಹಿಂದ್ (ಎಜಿಹೆಚ್)ಗೆ ಲೆಲ್ಹಾರಿಯನ್ನು ನೂತನ ಕಮಾಂಡರ್ ನನ್ನಾಗಿ ನೇಮಕ ಮಾಡಲಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ