ಬೆಂಗಳೂರು ,ಅ.22- ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ರಾಜಕಾಲುವೆಗಳು ತುಂಬಿ ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.
ಇಂದು ಸಂಜೆ ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ.
ಚಿಕ್ಕಪೇಟೆ ಮೆಟ್ರೋ ನಿಲ್ದಾಣ ನೀರಿನಿಂದ ಮುಚ್ಚಿಹೋಗಿತ್ತು. ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಸಂಜಯ್ ನಗರ, ಹೆಬ್ಬಾಳ, ಶಾಂತಿ ನಗರ, ಕೋರಮಂಗಲ, ಶ್ರೀನಿವಾಸ ನಗರ, ಗಿರಿ ನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ನಿರಂತರ ಮಳೆಯಾಗಿದೆ.
ನಗರದ ಶೇಷಾದ್ರಿಪುರಂ, ಮೆಜೆಸ್ಟಿಕ್, ಕೋಡಿಗೆಹಳ್ಳಿ, ಯಲಹಂಕ, ಯಶವಂತಪುರ,ವಿಲ್ಸನ್ ಗಾರ್ಡನ್, ಶಾಂತಿನಗರ, ಹೆಬ್ಬಾಳ, ಮಾನ್ಯತಾ ಟೆಕ್ ಪಾರ್ಕ್, ಬಸವನಗುಡಿ, ನಾಗರಬಾವಿ, ಮಲ್ಲೇಶ್ವರಂ, ಜಯನಗರ, ನಾಗವಾರ ಜಂಕ್ಷನ್ಗಳಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು.
ಕೋಡಿಗೆಹಳ್ಳಿ ಬಳಿಯ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡಿದ್ದು, ಸುಮಾರು 2 ಅಡಿಯಷ್ಟು ನಿಂತಿರುವ ಮಳೆ ನೀರಿನಲ್ಲೇ ವಾಹನಗಳು ಚಲಿಸುತ್ತಿರುವ ದೃಶ್ಯ ಕಂಡುಬಂದಿತು.
ಮಾಗಡಿರಸ್ತೆಯಲ್ಲಿರುವ ಕುಷ್ಠರೋಗ ಆಸ್ಪತ್ರೆಯ ಕಾಂಪೌಂಡ್ ಕುಸಿದು ಬಿದ್ದುವುದಲ್ಲದೆ ಸಮೀಪದ ಬಿಬಿಎಂಪಿ ಕ್ವಾಟರ್ಸ್ನ ಹಲವು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅನಾಹುತವಾಗಿದೆ.
ಇಂದು ಸಂಜೆ ವೇಳೆಗೆ ಮತ್ತೆ ವರುಣನ ಆರ್ಭಟದ ಜೊತೆಗೆ ಗುಡುಗು-ಮಿಂಚು ಕೂಡ ಕಾಣಿಸಿಕೊಳ್ಳಲಿದೆ. ಕೆಲ ಗಂಟೆಗಳ ಬಳಿಕ ಮಳೆ ಕೊಂಚ ವಿರಾಮ ನೀಡಲಿದ್ದು, ಮತ್ತೆ ರಾತ್ರಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.