ಬೆಂಗಳೂರು: ಜನರ ಸುಲಭ ಉಪಯೋಗಕ್ಕೆಂದು ಮಾಡಲಾಗಿದ್ದ ಆನ್ಲೈನ್ ನೊಂದಣಿ ವ್ಯವಸ್ಥೆ ಬಹಳಷ್ಟು ದುರುಪಯೋಗವಾಗುತ್ತಿರುವ ಅನುಮಾನವಿದೆ. ಇದಕ್ಕೆ ಇಂಬು ಕೊಡುವಂತೆ ಐಎಎಸ್ ಅಧಿಕಾರಿಯೊಬ್ಬರು ಇ–ನೊಂದಣಿ ಅಕ್ರಮದ ವಿರುದ್ಧ ಸೈಬರ್ ಕ್ರೈಮ್ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಬಹಳಷ್ಟು ಆಸ್ತಿಗಳನ್ನು ಅಕ್ರಮವಾಗಿ ನೊಂದಣಿ ಮಾಡಲಾಗುತ್ತಿದೆ. ಈ ಮೂಲಕ ಸರ್ಕಾರಕ್ಕೆ ಕೋಟ್ಯಂತರ ಹಣ ನಷ್ಟವಾಗಿದೆ ಎಂದು ನೊಂದಣಿ ವಿಭಾಗದ ಮಹಾ ನಿರೀಕ್ಷಕ ತ್ರಿಲೋಕ್ ಚಂದ್ರ ಅವರು ದೂರು ನೀಡಿದ್ದಾರೆ.
ಆರ್.ವಿ. ದೇಶಪಾಂಡೆ ಅವರು ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ಈ ಅಕ್ರಮ ನಡೆದಿದೆ ಎನ್ನಲಾಗಿದೆ. ಆನ್ಲೈನ್ ಮೂಲಕ ಬೃಹತ್ ಅವ್ಯವಹಾರಗಳಾಗಿವೆ. 20ಕ್ಕೂ ಹೆಚ್ಚು ಉಪನೊಂದಣಾಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬುದು ತ್ರಿಲೋಕ್ ಚಂದ್ರ ನೀಡಿದ ದೂರಿನಿಂದ ತಿಳಿದುಬಂದಿದೆ.
ತ್ರಿಲೋಕ್ ಚಂದ್ರ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಕಾವೇರಿ ಸಾಫ್ಟ್ವೇರ್ನಲ್ಲಿ ಅಕ್ರಮವಾಗಿದೆ ಎಂಬ ಆರೋಪ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾವೇರಿ ಸಾಫ್ಟ್ವೇರ್ನಲ್ಲಿ ಇ-ನೊಂದಣಿ ಮಾಡಿಸಿಕೊಳ್ಳಬಹುದು. ಈ ತಂತ್ರಾಂಶದಲ್ಲಿ ಹಲವು ದಾಖಲಾತಿಗಳು ಟ್ಯಾಂಪರ್ ಆಗಿವೆ ಮತ್ತು ಬದಲಾವಣೆಗಳಾಗಿವೆ. ಈ ರೀತಿ ಬದಲಾವಣೆ ಮಾಡಬೇಕಾದರೆ ಅದರದ್ದೇ ನಿಯಮಗಳಿವೆ. ಅದಕ್ಕೆ ಕೆಲ ಅಧಿಕಾರಿಗಳ ಅನುಮತಿ ಬೇಕು. ಆದರೂ ಇಲಾಖೆಯವರು ಕೆಲವು ದಾಖಲಾತಿಗಳನ್ನ ಮಾರ್ಪಾಡು ಮಾಡಿದ್ದಾರೆ. ಯಾವುದೇ ಅನುಮತಿ ಇಲ್ಲದೇ ಸೇಲ್ ಡೀಡ್ ಕೂಡ ಮಾಡಿದ್ದಾರೆ. ಕೆಲವರು ಖಾತೆಗಳಲ್ಲಿ ಬದಲಾವಣೆ ಮಾಡಿದ್ದಾರೆ. ಎಷ್ಟು ದಾಖಲಾತಿಗಳು ಬದಲಾವಣೆ ಆಗಿದೆ ಎಂಬುದರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ಹೇಳಿದ್ಧಾರೆ.