ಬಡಜನರ ಅಭಿವೃದ್ಧಿ ಕುರಿತು ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞ ಅಭಿಜಿತ್​ ದೃಷ್ಟಿಕೋನ ಶ್ಲಾಘನೀಯ; ಮೆಚ್ಚುಗೆ ಸೂಚಿಸಿದ ಮೋದಿ

ನವದೆಹಲಿ; ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರ ಸಾಧನೆಗೆ ಭಾರತ ದೇಶ ಹೆಮ್ಮೆ ಪಡುತ್ತದೆ ಮತ್ತು ಬಡವರ ಕುರಿತ ಅವರ ದೃಷ್ಟಿಕೋನ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದು ರಾಜಧಾನಿ ನವ ದೆಹಲಿಯಲ್ಲಿ ಮೊದಲ ಬಾರಿಗೆ ಪರಸ್ಪರ ಭೆಟಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಅರ್ಥಶಾಸ್ತ್ರಜ್ಞ ಅಬಿಜಿತ್ ಬ್ಯಾನರ್ಜಿ ದೇಶದ ಆರ್ಥಿಕ ಬೆಳವಣಿಗೆ ಕುರಿತು ಚರ್ಚೆ ನಡೆಸಿದ್ದರು. ಈ ಭೇಟಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಕುತೂಹಲವನ್ನು ಹುಟ್ಟುಹಾಕಿತ್ತು.

ಈ ಭೇಟಿ ಮತ್ತು ಚರ್ಚೆಯ ಕುರಿತು ತನ್ನ ಖಾಸಗಿ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, “ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರೊಂದಿಗಿನ ಸಭೆ ಅತ್ಯುತ್ತಮವಾಗಿತ್ತು. ಬಡಜನರ ಅಭಿವೃದ್ಧಿಯ ಕುರಿತು ಅವರ ದೃಷ್ಟಿಕೋನ ಶ್ಲಾಘನೀಯ. ಈ ಸಭೆಯಲ್ಲಿ ನಾವಿಬ್ಬರೂ ದೇಶದ ನಾನಾ ವಿಚಾರಗಳ ಕುರಿತಾಗಿ ಆರೋಗ್ಯಕರ ಚರ್ಚೆ ನಡೆಸಿದ್ದೇವೆ. ಅವರ ಸಾಧನೆಯ ಕುರಿತು ಇಡೀ ದೇಶ ಹೆಮ್ಮೆ ಪಡುತ್ತಿದ್ದು, ಅವರ ಭವಿಷ್ಯ ಉಜ್ವಲವಾಗಿರಲಿ” ಎಂದು ತಿಳಿಸಿದ್ದಾರೆ.

ಈ ಹಿಂದೆ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸಿದ್ದರು. ಕೇಂದ್ರ ಸರ್ಕಾರ ಹಾಗೂ ಆರ್​ಬಿಐ ಬೇಜವಾಬ್ದಾರಿ ನಡೆಯಿಂದಲೇ ದೇಶದ ಬ್ಯಾಂಕಿಂಗ್ ವ್ಯವಸ್ಥೆ ದಿವಾಳಿಯ ಅಂಚಿಗೆ ಬಂದು ನಿಂತಿದೆ ಎಂದು ಹರಿಹಾಯ್ದಿದ್ದರು. ಅಲ್ಲದೆ, ದೇಶದ ಒಳಿತಿಗಾಗಿ ಮತ್ತು ಅಭಿವೃದ್ಧಿಗಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರ್ಥಿಕತೆಯನ್ನು ಸರ್ಕಾರ ಪಾಲಿಸುವಂತೆಯೂ ಸೂಚನೆ ನೀಡಿದ್ದರು.

ಅಭಿಜಿತ್ ಬ್ಯಾನರ್ಜಿ ಅವರ ಅಭಿಪ್ರಾಯಕ್ಕೆ ರಾಷ್ಟ್ರದಾದ್ಯಂತ ಮೋದಿ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಅವರನ್ನು ಕಾಂಗ್ರೆಸ್ ಅರ್ಥಶಾಸ್ತ್ರಜ್ಞ ಎಂದೂ ಟೀಕೆಗೆ ಒಳಪಡಿಸಿದ್ದರು. ಆದರೆ, ಇಂದು ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ಅಭಿಜಿತ್ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ