ಬೆಂಗಳೂರು, ಅ.22- ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ ಶೀಘ್ರ ಅಧ್ಯಕ್ಷರನ್ನು ನೇಮಕ ಮಾಡಿ ಈ ಮೂಲಕ ಸಮಾಜದ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದರು.
ನಗರದಲ್ಲಿಂದು ರಾಜ್ಯ ಸವಿತಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸವಿತಾ ಸಮಾಜ ನಮ್ಮ ಜೀವನದ ದಿನನಿತ್ಯದ ಆಗು-ಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ನಾದ ಸ್ವರದ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದು ಹಾಗೂ ನಮ್ಮ ಅಂದ ಹೆಚ್ಚಿಸುವ ಮೂಲಕ ಆತ್ಮವಿಶ್ವಾಸಕ್ಕೆ ಇಂಬು ನೀಡುವ ಕೆಲಸವನ್ನು ಈ ಸಮಾಜ ನಿರ್ವಹಿಸುತ್ತದೆ.ಈ ಸಮಾಜದ ಅಭಿವೃದ್ಧಿಗೆ ಬೇಕಾಗಿರುವ ಅಗತ್ಯ ಸೌಲಭ್ಯಗಳನ್ನು ನೀಡುವುದು ನಮ್ಮ ಜವಾಬ್ದಾರಿ.ಈ ಹಿನ್ನೆಲೆಯಲ್ಲಿ ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ ಶೀಘ್ರವಾಗಿ ಅಧ್ಯಕ್ಷರ ನೇಮಕ ಮಾಡಲಾಗುವುದು.ನೀವು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಬ್ಯೂಟಿ ಬ್ಯೂಸಿನೆಸ್ ಬಹಳ ತ್ವರಿತವಾಗಿ ಬೆಳೆಯುತ್ತಿರುವ ಹಾಗೂ ಅಮೂಲಾಗ್ರ ಬದಲಾವಣೆ ಕಾಣುತ್ತಿರುವ ಉದ್ಯಮ. ಈ ಉದ್ಯಮಕ್ಕೆ ಬೇಕಾಗಿರುವ ಕೌಶಲ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೂತನ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ.ನಮ್ಮ ದೇಶದಲ್ಲಿ ಕೌಶಲ್ಯತೆಯ ಪ್ರಮಾಣ ಇರುವುದು ಶೇ.4 ರಷ್ಟು ಮಾತ್ರ.ಶಿಕ್ಷಣದ ಜತೆಯಲ್ಲಿಯೇ ಉದ್ಯೋಗಕ್ಕೆ ಬೇಕಾಗಿರುವ ಕೌಶಲ್ಯವನ್ನು ಹೆಚ್ಚಿಸುವುದರ ಅಗತ್ಯವಿದೆ.ಈ ಅಗತ್ಯತೆ ಮನಗಂಡು ಇದಕ್ಕೆ ಪೂರಕವಾದ ಸಲಹೆಗಳನ್ನು ನೀಡುವಂತೆ ಉಪಮುಖ್ಯಮಂತ್ರಿಗಳು ತಿಳಿಸಿದರು.
ಮಹರ್ಷಿ ಸವಿತಾ ಶಿಕ್ಷಣ ಸಂಸ್ಥೆಯು ಸಂಜಯನಗರದಲ್ಲಿ ಸ್ವಂತ ಕಟ್ಟಡದಲ್ಲಿ ನಡೆಸುತ್ತಿರುವ ಕಾಲೇಜಿಗೆ ಪದವಿ ಕಾಲೇಜು ಮಂಜೂರು ಮಾಡುವ ಹಾಗೂ P್ಷËರಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವ ಭರವಸೆಯನ್ನೂ ಇದೇ ವೇಳೆ ಡಾ.ಅಶ್ವಥ್ ನಾರಾಯಣ್ ನೀಡಿದರು.
ರಾಜ್ಯ ಸವಿತಾ ಸಮಾಜದ ನೂತನ ಅಧ್ಯಕ್ಷ ಎನ್.ಸಂಪತ್ ಕುಮಾರ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಅಗತ್ಯವಿರುವ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಇವುಗಳ ಈಡೇರಿಕೆಗೆ ರಾಜ್ಯ ಸರ್ಕಾರದ ಜತೆ ಕೈಜೊಡಿಸಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಸವಿತಾ ಸಮಾಜದ ಉಪಾಧ್ಯಕ್ಷ ಕೃಷ್ಣ ಡಿ.ಆರ್.(ಮಾವಳ್ಳಿ ಕೃಷ್ಣ) ಸೇರಿದಂತೆ ಹಲವರು ಭಾಗವಹಿಸಿದ್ದರು.