ಮುಂದುವರೆದ ಮಳೆಯ ರುದ್ರವತನ

ಬೆಂಗಳೂರು,ಅ.22-ಮಳೆಯ ರುದ್ರವತನÀ ಮುಂದುವರೆದಿದೆ. ಮಳೆಯ ಆರ್ಭಟಕ್ಕೆ ಮೃತರ ಸಂಖ್ಯೆ 9ಕ್ಕೆ ಏರಿದೆ.ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಬಯಲು ಸೀಮೆಗಳಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.

ಎರಡು ತಿಂಗಳ ಹಿಂದಷ್ಟೇ ಮಹಾ ಪ್ರವಾಹದಿಂದ ನಲುಗಿದ್ದ ಉತ್ತರ ಕರ್ನಾಟಕ ಹಾಗೂ ವಿವಿಧೆಡೆ ಆರ್ಭಟಿಸಿದ್ದ ಮಳೆ, ನಿನ್ನೆ ಏಳು ಮಂದಿಯನ್ನು ಬಲಿ ತೆಗೆದುಕೊಂಡಿದ್ದು ಇಂದು ಇಬ್ಬರನ್ನು ಆಹುತಿ ಪಡೆದಿದೆ.

ಭಾರೀ ಮಳೆಗೆ ಮೇಲ್ಛಾವಣಿ ಕುಸಿದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ನವಲಗುಂದ ತಾಲೂಕು ಖನ್ನೂರು ಗ್ರಾಮದಲ್ಲಿ ನಸುಕಿನ ಜಾವ ನಡೆದಿದೆ.

ಶೇಕವ್ವ ಶಿವಪ್ಪ ತಿಪ್ಪಣ್ಣನವರ್(65) ಮೃತ ದುರ್ದೈವಿ. ಶಿಥಿಲಗೊಂಡಿದ್ದ ಮನೆ ಕುಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇತ್ತ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಕುಮಾರ್(35) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಬೆಳಗಾವಿ ತಾಲೂಕಿನ ಗ್ರಾಮವೊಂದರಲ್ಲಿ ಜಾನುವಾರುಗಳ ರಕ್ಷಣೆಗೆ ತೆರಳಿದ್ದ 16 ವರ್ಷದ ಸಂತೋಷ್ ಎಂಬ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದು ಆತನ ಪತ್ತೆಗೆ ರಕ್ಷಣಾ ಕಾರ್ಯ ಚುರುಕುಗೊಂಡಿದೆ.

ಕೆಆರ್ ಪೇಟೆಯ ಸಿಂಧಗಟ್ಟ ಕೆರೆ ಒಡೆದು ನೀರು ಹರಿದ ಪರಿಣಾಮ ಹೊಲ-ಗದ್ದೆಗಳೆಲ್ಲ ಜಲಾವೃತವಾಗಿವೆ. ಕೆರೆ ಸುತ್ತಮುತ್ತ ಇದ್ದ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಮಳೆ ಮತ್ತು ಮಹಾರಾಷ್ಟ್ರದ ಕೊಯ್ನಾ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಹಳ್ಳಗಳೆಲ್ಲಾ ನದಿಗಳಂತಾಗಿ, ನದಿಗಳು ಸಾಗರಗಳಂತಾಗಿವೆ.

ಬಾಗಲಕೋಟೆ, ಬೆಳಗಾವಿ, ಯಾದಗಿರಿ, ಹಾವೇರಿ, ವಿಜಯಪುರ, ಹುಬ್ಬಳ್ಳಿ, ಧಾರವಾಡ ಸೇರಿದಂತೆ 12 ಜಿಲ್ಲೆಗಳ ಜನ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೃಷ್ಣೆ, ಮಲಪ್ರಭಾ, ಘಟಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಹಾಗೂ ಜಲಾವೃತಗೊಂಡ ಗ್ರಾಮಗಳಿಂದ ಜನರನ್ನುಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಬೆಳಗಾವಿಯ ಗೋಕಾಕ್ ಫಾಲ್ಸ್ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.ಕೊಪ್ಪಳದಲ್ಲೂ ಭಾರೀ ಮಳೆಯಾಗಿದ್ದು ಗಂಗಾವತಿ ತಾಲೂಕಿನ ನವ ಬೃಂದಾವನ ಜಲಾವೃತಗೊಂಡಿದೆ.

ಮಲಪ್ರಭಾ ನದಿಗೆ ನವಿಲುತೀರ್ಥ ಡ್ಯಾಂನಿಂದ ಏಕಾಏಕಿ ನೀರು ಬಿಟ್ಟ ಹಿನ್ನಲೆಯಲ್ಲಿ ಪ್ರವಾಹಕ್ಕೆ ಸಿಕ್ಕಿ ಬೀದಿ ಬದಿಯಲ್ಲಿ ವಾಸಿಸುತ್ತಿರುವ ನೆರೆ ಸಂತ್ರಸ್ತರ ಗೋಳು ಕೇಳುವವರಿಲ್ಲದಂತಾಗಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಹಿರೇ ಹಂಪಿಹೊಳಿ, ಚಿಕ್ಕ ಹಂಪಿಹೊಳಿ ಮುಂತಾದ ಗ್ರಾಮಗಳು ಜಲಾವೃತಗೊಂಡು ಗ್ರಾಮ ತೊರೆದ ಗ್ರಾಮಸ್ಥರು ಎಪಿಎಂಸಿ ಮಾರುಕಟ್ಟೆಯಲ್ಲಿ ಆಶ್ರಯ ಪಡೆದಿದ್ದಾರೆ.

ಮೈಸೂರು ಭಾಗದ ಚಾಮರಾಜನಗರ, ಮೈಸೂರು, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಾಳೆಯಿಂದ ಶನಿವಾರದವರೆಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

ಇತ್ತ ಮಹಾರಾಷ್ಟ್ರದಲ್ಲೂ ಬಹುತೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಉತ್ತರ ಕರ್ನಾಟಕಕ್ಕೆ ನೆರೆ ರಾಜ್ಯದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಮುಳುಗಡೆ ಭೀತಿ ಎದುರಾಗಿದೆ.

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಹೆಬ್ಬೂರು, ಗೌರಾಪುರ, ಶಿವನಿ, ಮುಗಳಿ ಮುಂತಾದೆಡೆ ಬೆಳೆದಿದ್ದ ಅಪಾರ ಪ್ರಮಾಣದ ಈರುಳ್ಳಿ ಮಳೆಯಿಂದ ನಾಶವಾಗಿದೆ.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನಲ್ಲಿ ರಾತ್ರಿಯಿಡಿ ಪ್ರವಾಹ ಸ್ವರೂಪದಲ್ಲಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ಥವಾಗಿದ್ದು ಸಂತ್ರಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ದಾವಣಗೆರೆ, ಚಿತ್ರದುರ್ಗ, ಹೊಸದುರ್ಗದಲ್ಲೂ ಮಳೆಯ ಆರ್ಭಟ ಜೋರಾಗಿದೆ.ದಾವಣಗೆರೆಯ ಹೆಬ್ಬಾಳ್ ಗ್ರಾಮದ ರಾಮೇಶ್ವರ ಶಾಲೆ ಜಲಾವೃತಗೊಂಡಿದೆ.ರಾಜಧಾನಿ ಬೆಂಗಳೂರಿನಲ್ಲೂ ಮಳೆಯ ಆರ್ಭಟ ಮುಂದುವರೆದಿದೆ. ಮಲ್ಲೇಶ್ವರಂ, ಸದಾಶಿವನಗರ, ಮೇಕ್ರಿ ಸರ್ಕಲ್, ಜಯನಗರ, ಬಿಟಿಎಂ ಲೇಔಟ್, ಮೈಕೋ ಲೇಔಟ್, ಹೆಚ್.ಎಸ್.ಆರ್.ಲೇಔಟ್, ಕೋರಮಂಗಲ, ಶಾಂತಿನಗರ ಸೇರಿದಂತೆ ಬಹುತೇಕ ಕಡೆ ಮಳೆ ಸುರಿದಿದ್ದು ಹಲವೆಡೆ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ