![sri-shivakumara-swamiji](http://kannada.vartamitra.com/wp-content/uploads/2018/05/sri-shivakumara-swamiji-587x381.jpg)
ಕೊಪ್ಪಳ: ಮುಂದಿನ ದಿನಗಳಲ್ಲಿ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ಸಿಗಲಿದೆ. ರಾಜ್ಯ ಸರ್ಕಾರ ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರಸ್ತುತ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರ ಚರ್ಚೆಯಲ್ಲಿದೆ. ಸಾವರ್ಕರ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಜೀವನ ಮುಡಿಪಾಗಿಟ್ಟು ಹೋರಾಡಿದ್ದಾರೆ. ಜೈಲುವಾಸ ಅನುಭವಿಸಿದ್ದಾರೆ. ಅಂತವರನ್ನ ಹೀಯಾಳಿಸಿದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದಂತಾಗಲಿದೆ. ಸಿದ್ದಗಂಗಾ ಶ್ರೀಗಳಿಗೂ ಭಾರತ ರತ್ನ ಬರುತ್ತದೆ. ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ.
ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧೆ ವಿಚಾರದಲ್ಲಿ ಮಾತನಾಡಿದ ಅವರು, ಇನ್ನೂ ಅವರು ಬಿಜೆಪಿ ಸೇರಿಲ್ಲ. ಅವರ ವ್ಯಾಜ್ಯ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ತೀರ್ಪು ಬಂದ ಬಳಿಕ ಅವರು ಪಕ್ಷಕ್ಕೆ ಸೇರಿದ ಮೇಲೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಚಿಂತಿಸಬೇಕು ಎಂದರು.
ಪಶ್ಚಿಮ ಮಹಾರಾಷ್ಟ್ರದ ಐದು ಜಿಲ್ಲೆಗಳ ಉಸ್ತುವಾರಿ ನನಗಿದೆ. ಅಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಹಿಂದಿನ ವಾತಾವರಣ ಸಂಪೂರ್ಣ ಬದಲಾಗಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. 288 ಸ್ಥಾನಕ್ಕೆ 220 ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದರು.
ಮಹದಾಯಿ ವಿಚಾರದಲ್ಲಿ ರೈತರು ಬೆಂಗಳೂರಿನಲ್ಲಿ ರಾಜ್ಯಪಾಲರ ಭೇಟಿಗಾಗಿ ಹೋರಾಟ ಮಾಡಿದ್ದರು. ಆದರೆ ಅವರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಅಲ್ಲದೆ ರಾಜ್ಯಪಾಲರಿಗೆ ಈ ವಿಷಯ ಬರಲ್ಲ. ಮಹದಾಯಿ ವಿಚಾರ ಮೂರು ರಾಜ್ಯಕ್ಕೆ ಸಂಬಂಧಿಸಿದೆ. ಮಹಾರಾಷ್ಟ್ರ ಸಿಎಂ ಮಾತುಕತೆಗೆ ಸಿದ್ದರಾಗಿದ್ದರು. ಗೋವಾ ಸಿಎಂ ಸಹಿತ ಸಿದ್ದರಾಗಿದ್ದು, ರಾಜ್ಯದಿಂದ ನಿಯೋಗ ತೆರಳಲು ಸಿದ್ದವಾಗಿತ್ತು. ಆದರೆ ಗೋವಾದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕರ್ನಾಟಕದ ಜೊತೆ ಸಭೆ ಮಾಡದಂತೆ ವಿರೋಧ ಮಾಡಿ ಹೋರಾಟ ಮಾಡಿದವು. ಹಾಗಾಗಿ ಈ ವಿಷಯ ನೆನಗುದಿಗೆ ಬಿದ್ದಿತು. ಮುಂದೆ ಮತ್ತೆ ಈ ವಿಷಯ ಚರ್ಚೆಗೆ ಬರಲಿದೆ ಎಂದರು.
ಸಾರಿಗೆ ಸಂಸ್ಥೆಯನ್ನ ಖಾಸಗೀಕರಣ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲ್ಲ. ಅದನ್ನು ಇನ್ನೂ ಹೆಚ್ಚು ಬಲವರ್ಧನೆಗೊಳಿಸುವೆನು. ಸಾರಿಗೆ ಕ್ಷೇತ್ರದಲ್ಲಿ ಇನ್ನೂ ಸುಧಾರಣೆ ತರುವ ಪ್ರಯತ್ನ ಮಾಡುವೆನು.