ಡಿಕೆಶಿ ಭೇಟಿಯಾಗಲು ತಿಹಾರ್ ಜೈಲಿಗೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ನವ ದೆಹಲಿ; ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ಇಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಇಂದು ತಿಹಾರ್ ಜೈಲಿಗೆ ತೆರಳಿದ್ದಾರೆ.
ಕುಮಾರಸ್ವಾಮಿ ಅವರ ಜೊತೆಗೆ ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಹಾಗೂ ಸಾ.ರಾ. ಮಹೇಶ್ ಸಹ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ತಿಹಾರ್ ಜೈಲಿಗೆ ತೆರಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್ 3 ರಂದು ಡಿ.ಕೆ. ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್​ನಲ್ಲಿ ಜಾಮೀನಿಗಾಗಿ ಸತತ ಅರ್ಜಿ ಸಲ್ಲಿಸಲಾಗುತ್ತಿದೆ. ಆದರೂ ಡಿಕೆಶಿ ಅವರಿಗೆ ಈವರೆಗೆ ಜಾಮೀನು ಲಭ್ಯವಾಗುತ್ತಿಲ್ಲ.

ಡಿಕೆಶಿ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಿದಾಗಲೇ ಅವರನ್ನು ಭೇಟಿ ಮಾಡಲು ಮಾಜಿ ಪ್ರಧಾನಿ ದೇವೇಗೌಡ ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈ ನಡುವೆ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಡಿಕೆಶಿ ಭೇಟಿಗೆ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಅಲ್ಲದೆ, ಇಂದೇ ಸಂಜೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಸಹ ಡಿಕೆಶಿ ಅವರನ್ನು ತಿಹಾರ್ ಜೈಲಿನಲ್ಲಿ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಅವರ ಜಾಮೀನು ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್​ ಇಂದೇ ನೀಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ