ಬೆಂಗಳೂರು, ಅ.21- ಇತ್ತೀಚೆಗೆ ಐಟಿ ದಾಳಿಗೆ ಒಳಗಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದು ಆದಾಯ ತೆರಿಗೆ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಅ.10ರಂದು ಪರಮೇಶ್ವರ್ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸಿತ್ತು.ಸುಮಾರು 25 ಕಡೆ ತಪಾಸಣೆ ನಡೆಸಿ ಐದು ಕೋಟಿಗೂ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿತ್ತು.
ಅದಕ್ಕೆ ಸಂಬಂಧಪಟ್ಟಂತೆ ಕಳೆದ ವಾರ ಪರಮೇಶ್ವರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿತ್ತು. ವಿಚಾರಣೆಗೆ ಆಗಮಿಸಿದ ಪರಮೇಶ್ವರ್ ಉತ್ತರ ನೀಡಲು ಕಾಲಾವಕಾಶ ಕೇಳಿದ್ದರು. ಅದರಂತೆ ಇಂದು ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಆದಾಯ ತೆರಿಗೆ ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಕೆಲವು ದಾಖಲಾತಿಗಳ ಬಗ್ಗೆ ಸ್ಪಷ್ಟನೆ ಕೇಳಲಾಗಿತ್ತು.ದಾಳಿ ನಂತರ ಪರಮೇಶ್ವರ್ ಅವರ ಆಪ್ತ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು.ಅದರ ಬೆನ್ನು ಹತ್ತಿದ ತನಿಖಾಧಿಕಾರಿಗಳಿಗೆ ಬಹುಕೋಟಿ ವಂಚನೆ ಪ್ರಕರಣದ ಸಂಸ್ಥೆಯಾದ ಐಎಂಎಯಿಂದ ರಮೇಶ್ ಮೂಲಕ ಐದು ಕೋಟಿ ಹಣ ಸಂದಾಯವಾಗಿರುವ ಮಾಹಿತಿ ಹೊರಬಿದ್ದಿತ್ತು.
ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ಸೀಟು ಬ್ಲಾಕಿಂಗ್ ನಡೆಯುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳಿಬ್ಬರು ನೀಡಿದ್ದ ದೂರ ಆದಾಯ ತೆರಿಗೆ ದಾಳಿಗೆ ಕಾರಣವಾಗಿತ್ತು.ಅನಂತರ ಈ ಪ್ರಕರಣ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದ್ದು, ತನಿಖೆ ವಿವಿಧ ದಿಕ್ಕುಗಳಲ್ಲಿ ಸಾಗುತ್ತಿದೆ.
ಅನಧಿಕೃತ ಆದಾಯ ಮೂಲಗಳ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಕೇಳಿರುವ ಪ್ರಶ್ನೆಗೆ ಪರಮೇಶ್ವರ್ ಇಂದು ಐಟಿ ಅಧಿಕಾರಿಗಳಿಗೆ ಉತ್ತರ ನೀಡಿದ್ದಾರೆ.
ಮೆಡಿಕಲ್ ಕಾಲೇಜು ವ್ಯವಹಾರವನ್ನು ತಮ್ಮ ಸಹೋದರ ಡಾ.ಶಿವಪ್ರಸಾದ್ ಅವರು ನೋಡಿಕೊಳ್ಳುತ್ತಿದ್ದರು.ಅವರ ನಿಧನದ ನಂತರ ಆನಂದ್ ಕಾಲೇಜಿನ ಮೇಲುಸ್ತುವಾರಿಯ ಜವಾಬ್ದಾರಿ ಹೊತ್ತಿದ್ದರು.ಮೆಡಿಕಲ್ ಸೀಟು ಬ್ಲಾಕಿಂಗ್ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಪರಮೇಶ್ವರ್ ಅಧಿಕಾರಿಗಳಿಗೆ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.