ಅಳ್ನಾವರ್- ಅಂಬೇವಾಡಿ ರೈಲ್ವೆ ಮಾರ್ಗವನ್ನು ಶೀಘ್ರವೇ ಆರಂಭಿಸಬೇಕು-ಮಾಜಿ ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು, ಅ.21- ದಾಂಡೇಲಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಗೆ ನೇರ ಸಂಪರ್ಕ ಕಲ್ಪಿಸುವ ಅಳ್ನಾವರ್-  ಅಂಬೇವಾಡಿ ರೈಲ್ವೆ ಮಾರ್ಗವನ್ನು ಶೀಘ್ರವೇ ಆರಂಭಿಸುವಂತೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಒತ್ತಾಯಿಸಿದ್ದಾರೆ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರಿಗೆ ಪತ್ರ ಬರೆದಿರುವ ದೇಶಪಾಂಡೆ ಅವರು, 2005ರಿಂದಲೂ ಅಳ್ನಾವರ್- ಅಂಬೇವಾಡಿ ಪ್ಯಾಸೆಂಜರ್ ರೈಲು ಪ್ರಾರಂಭಿಸಲು ನಿರಂತರವಾಗಿ ಬೇಡಿಕೆ ಸಲ್ಲಿಸಲಾಗುತ್ತಿದೆ. ನಾನು ಹಲವಾರು ಬಾರಿ ಪತ್ರ ಬರೆದಿದ್ದೇನೆ. ಕೇಂದ್ರ ರೈಲ್ವೆ  ಸಚಿವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಸುರೇಶ್ ಅಂಗಡಿಯವರನ್ನೂ ಖುದ್ದಾಗಿ ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದ್ದೇನೆ ಎಂದರು.

ಅಕ್ಟೋಬರ್ 17ರಂದು ಅಳ್ನಾವರ್- ಅಂಬೇವಾಡಿ ರೈಲ್ವೆ ಸಂಚಾರದ ಸುರಕ್ಷತಾ ಪರೀಕ್ಷೆ ಮತ್ತು ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದೆ.  ಕೂಡಲೇ ಈ ಮಾರ್ಗದಲ್ಲಿ ರೈಲು  ಸಂಚಾರ ಆರಂಭಿಸಿದರೆ ದಾಂಡೇಲಿ ಪ್ರವಾಸಿ ಕೇಂದ್ರ ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ದಾಂಡೇಲಿಗೆ ಪ್ರತಿ ದಿನ ನೂರಾರು ಮಂದಿ ಬೇರೆ ಬೇರೆ ಭಾಗಗಳಿಂದ  ಆಗಮಿಸುತ್ತಾರೆ. ರೈಲು ಸಂಪರ್ಕ ಕಲ್ಪಿಸಿದರೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ದೇಶಪಾಂಡೆ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ