ಬೆಂಗಳೂರು,ಅ.19: ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗಗಳಲ್ಲಿ ನಿಲ್ಲಿಸಿದಂತಹ ಕಾರುಗಳ ಕೀಯನ್ನು ಸ್ಥಳದಲ್ಲೇ ತಯಾರು ಮಾಡಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಇಬ್ಬರು ಕಾರುಗಳ್ಳರನ್ನು ಆಗ್ನೇಯ ವಿಭಾಗದ ಹುಳಿಮಾವು ಠಾಣೆ ಪೊಲೀಸರು ಬಂಧಿಸಿ 1.70 ಕೋಟಿ ರೂ. ಬೆಲೆಯ 15 ಐಷರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದ ಪರಮೇಶ್ವರನ್(38) ಮತ್ತು ಸದ್ದಾಂ ಹುಸೇನ್(28) ಬಂಧಿತ ಕಾರುಗಳ್ಳರು.
ಆ.13ರಂದು ಹರಿಕೃಷ್ಣ ಎಂಬುವರು ತಮ್ಮ ಡಿಸ್ಕವರಿ ಬೈಕ್ನ್ನು ಬಸವನಪುರದ ಬಳಿ ನಿಲ್ಲಿಸಿ ಕರ್ತವ್ಯಕ್ಕೆ ತೆರಳಿ ಸಂಜೆ ಬಂದು ನೋಡುವಷ್ಟರಲ್ಲಿ ಬೈಕ್ ಕಾಣೆಯಾಗಿತ್ತು. ಈ ಸಂಬಂಧ ಹುಳಿಮಾವು ಠಾಣೆಯಲ್ಲಿ ದೂರು ನೀಡಲಾಗಿತ್ತು.
ಅಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಇಶಾಪಂತ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ವಾಸು ಅವರ ನೇತೃತ್ವದಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳ್ಳರ ಪತ್ತೆಗಾಗಿ ತಂಡ ರಚಿಸಲಾಗಿತ್ತು.
ಈ ತಂಡ ಕಾರ್ಯಾಚರಣೆ ನಡೆಸಿ ತಮಿಳುನಾಡು ಮೂಲದ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ರಾತ್ರಿ ವೇಳೆ ನಾವಿಬ್ಬರು ಕಾರಿನಲ್ಲಿ ಬಂದು ರಸ್ತೆಬದಿ ಹಾಗೂ ಮನೆಗಳ ಮುಂದೆ ಬೀಗ ಹಾಕಿ ನಿಲ್ಲಿಸಿರುವ ಕಾರುಗಳನ್ನು ಗುರುತಿಸಿ ಉಪಕರಣಗಳಿಂದ ಹೊಸ ಕೀಯರನ್ನು ಸ್ಥಳದಲ್ಲೇ ಕೆಲವೇ ನಿಮಿಷದಲ್ಲಿ ತಯಾರು ಮಾಡಿ ಕಾರುಗಳನ್ನು ಕಳ್ಳತನ ಮಾಡುತ್ತಿದುದ್ದಾಗಿ ಒಪ್ಪಿಕೊಂಡಿದ್ದಾರೆ.
ಕಳವು ಮಾಡಿದ ಕಾರುಗಳಲ್ಲಿನ ನೋಂದಣಿ ಸಂಖ್ಯೆಯನ್ನು ಬದಲಾಯಿಸಿ ಚಾಲಕರಿಗೆ ಕೊಟ್ಟು ತಮಿಳುನಾಡಿಗೆ ಕಳುಹಿಸಿ ಅಲ್ಲಿ ಪರಿಚಯ ಇರುವವರಿಗೆ ಮಾರಾಟ ಮಾಡುತ್ತಿದುದು ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಗಳಿಂದ ನಾಲ್ಕು ವಿಟೇರಾ ಬ್ರೀಜಾ ಕಾರು, ಐದು ಮಾರುತಿ ಸ್ವಿಫ್ಟ್ ಡಿಸೈರ್ ಕಾರು, 2 ಮಾರುತಿ ಶಿಫ್ಟ್ , 3 ಟಯೋಟ ಇನ್ನೋವಾ ಕಾರು, ಒಂದು ಮಾರುತಿ ಸುಜುಕಿ ಸಿಯಾಜ್ ಕಾರು ಮತ್ತು ಬಜೆಟ್ ಡಿಸ್ಕವರಿ ಮೋಟಾರ್ ಸೈಕಲ್ನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ಹುಳಿಮಾವು, ವಿನೋಬಾನಗರ, ಚನ್ನಪಟ್ಟಣ ಗ್ರಾಮಾಂತರ, ಮದ್ದೂರು, ಜಯನಗರ, ವಿಶ್ವನಾಥಪುರ, ಕೋಲಾರ ಗ್ರಾಮಾಂತರ, ಚಿತ್ರದುರ್ಗ, ಗಲ್ಪೇಟೆ, ಶ್ರೀನಿವಾಸಪುರ, ಗೋವಾದ 2 ಪ್ರಕರಣ, ಮುಳಬಾಗಿಲು ಹಾಗೂ ರಾಮನಗರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ.