ಬೆಂಗಳೂರು,ಅ.19- ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಾಣದ ಪ್ರವಾಹ ಉಂಟಾಗಿ ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡು ಬೀದಿಪಾಲಾಗಿದ್ದರು. ಅವರನ್ನು ನೋಡಿ ನನಗೆ ಒಂದು ಕ್ಷಣ ಜೀವವೇ ಹೋದಂತೆ ಭಾಸವಾಯಿತು.ಹೀಗಾಗಿ ನೊಂದು ಪಕ್ಷದ ವಿರುದ್ದ ಮಾತನಾಡಿದೆ ಹೊರತು ಇದರಲ್ಲಿ ಯಾವುದೇ ದುರದ್ದೇಶವಿರಲಿಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಕೇಂದ್ರ ಶಿಸ್ತು ಸಮಿತಿಗೆ ಇಮೇಲ್ ಮೂಲಕ ಪತ್ರ ಬರೆದಿರುವ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ. ಕೇಂದ್ರದಲ್ಲಿ ಸಂಸದನಾಗಿ, ಶಾಸಕನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ನನಗೆ ನನ್ನ ಭಾಗದ ಜನರ ಸ್ಥಿತಿ ನೋಡಿ ನೊಂದು ಮಾತನಾಡಿದ್ದೇನೆ ಹೊರತು ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.
ನನಗೆ ಪಕ್ಷ ತಾಯಿ ಸಮಾನ ಎಂದು ತಿಳಿದುಕೊಂಡಿದ್ದೇನೆ. ಅದರಂತೆ ಕೆಲಸ ಮಾಡುತ್ತಿದ್ದೇನೆ. ಎಲ್ಲಿಯೂ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿಲ್ಲ. ನನ್ನ ಜನರು ಮನೆಮಠ, ಆಸ್ತಿಪಾಸ್ತಿ, ಹಸುಗಳು, ಬೆಳೆದುನಿಂತ ಬೆಳೆ ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಅನಾಥರಾಗಿದ್ದರು. ಹೀಗಿದ್ದಾಗ ನನ್ನ ಮನಸ್ಸಿಗೆ ಹೇಗಾಗಬಾರದು ಎಂದು ನೋವು ಹೊರಹಾಕಿದ್ದಾರೆ.
ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಮಾಧ್ಯಮಗಳಲ್ಲಿನ ವರದಿ ಹಾಗೂ ನನ್ನ ಕ್ಷೇತ್ರದಲ್ಲಿನ ಜನರ ಸ್ಥಿತಿಗತಿ ನೋಡಿ ಈ ಹೇಳಿಕೆ ನೀಡಿದ್ದೇನೆ. ನಾನು ಎಲ್ಲಿಯೂ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರು, ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಯಾರಿಗೂ ಕೂಡ ಮುಜುಗರ ತರುವ ಕೆಲಸ ಮಾಡಿಲ್ಲ. ನನ್ನ ಇತಿಮಿತಿಯೊಳಗೆ ಮಾತನಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಳೆದ 5ರಂದು ಯತ್ನಾಳ್ಗೆ ಪಕ್ಷದ ವಿರುದ್ದ ಮಾತನಾಡಿದ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿ 10 ದಿನದೊಳಗೆ ಉತ್ತರಿಸುವಂತೆ ಸೂಚನೆ ಕೊಟ್ಟಿತ್ತು.
ಉತ್ತರ ಕರ್ನಾಟಕದಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗಿದ್ದರಿಂದ ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಲು ವಿಳಂಬ ಮಾಡಿದ್ದರಿಂದ ಸಂಸದರು ಹಾಗೂ ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರ ವಿರುದ್ದ ಯತ್ನಾಳ್ ಗುಡುಗಿದ್ದರು.