ದ್ವೇಷದ ರಾಜಕಾರಣ ಬಹಳಷ್ಟು ದಿನ ನಡೆಯುವುದಿಲ್ಲ-ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು, ಅ.19-ದ್ವೇಷದ ರಾಜಕಾರಣ ಬಹಳಷ್ಟು ದಿನ ನಡೆಯುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಕೇಂದ್ರ ಸರ್ಕಾರ ಮತ್ತು ಸ್ವಪಕ್ಷೀಯರ ವಿರುದ್ಧ  ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಏಳು ಮಂದಿ  ಬೆಂಬಲಿಗರನ್ನು ಅಮಾನತುಗೊಳಿಸಿರುವ ಕೆಪಿಸಿಸಿ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಿನ್ನೆ ಸಂಜೆ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು, ಕೋಲಾರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಸಾದ್‍ಬಾಬು, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕುಮಾರ್, ಕೋಲಾರ ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಅತಾವುಲ್ಲಾ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಇಕ್ಬಾಲ್ ಅಹಮ್ಮದ್, ಎಸ್‍ಸಿ ವಿಭಾಗದ ಜಿಲ್ಲಾಧ್ಯಕ್ಷ  ಕೆ.ಜಯದೇವ, ಎಸ್‍ಟಿ ವಿಭಾಗದ ಜಿಲ್ಲಾಧ್ಯಕ್ಷ ನಾಗರಾಜ್, ಮುಖಂಡರಾದ ಎಲ್.ಖಲೀಲ್ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ದೂರನ್ನು ಆಧರಿಸಿ ಅಮಾನತು ಮಾಡಿದ್ದರು.

ಈ ಮೂಲಕ ಕಾಂಗ್ರೆಸ್‍ನಲ್ಲಿನ ಬಣ ಹಾಗೂ ದ್ವೇಷದ ರಾಜಕಾರಣ ತೀವ್ರ ಸ್ವರೂಪಕ್ಕೆ ತಿರುಗಿದೆ.ತಮ್ಮ ಬೆಂಬಲಿಗರನ್ನು ಅಮಾನತುಗೊಳಿಸುತ್ತಿದ್ದಂತೆ ಮುನಿಯಪ್ಪ ಕೆಂಡಾಮಂಡಲರಾಗಿದ್ದಾರೆ.

ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ ನಾಯಕರನ್ನು ದಂಡಿಸುವಂತೆ ಖುದ್ದಾಗಿ ಮುನಿಯಪ್ಪ ದೂರು ನೀಡಿದ್ದರು. ಕೆಪಿಸಿಸಿ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ ಮುನಿಯಪ್ಪ ಅವರ ಬೆಂಬಲಿಗರು ಪತ್ರಿಕಾ ಹೇಳಿಕೆ ನೀಡಿದ್ದನ್ನೇ ನೆಪ ಮಾಡಿಕೊಂಡು ತಕ್ಷಣವೇ ಅಮಾನತು ಆದೇಶ  ಹೊರಡಿಸಲಾಗಿದೆ. ಇದು ಕಾಂಗ್ರೆಸ್‍ನಲ್ಲಿ  ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಮಾನತು ಆದೇಶದ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಒತ್ತಡ ಇದೆ ಎಂಬ ಆರೋಪಗಳು ಕೇಳಿ ಬಂದಿವೆ.

ಇಂದು ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಚ್.ಮುನಿಯಪ್ಪ ಅವರು ದ್ವೇಷದ ರಾಜಕಾರಣ ಬಹಳಷ್ಟು ದಿನ ನಡೆಯುವುದಿಲ್ಲ. ಜೆಡಿಎಸ್‍ನಿಂದ ಇತ್ತೀಚೆಗೆ ಕಾಂಗ್ರೆಸ್‍ಗೆ ಬಂದ ಮುಖಂಡರು ಮಾತನಾಡಿದ್ದು, ಉಳಿದವರು ಪಕ್ಷ ಹಾಗೂ ಪಕ್ಷದ ಮುಖಂಡರ ವಿರುದ್ಧ ಮಾತನಾಡಿಲ್ಲ. ಹಾಗಾಗಿ ಯಾರ ವಿರುದ್ಧವೂ ಕ್ರಮಕೈಗೊಳ್ಳಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರಿಗೆ ಸಲಹೆ ನೀಡಿದ್ದೆ.

ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವಿರುದ್ಧವೂ ಮಾತನಾಡಿದ್ದಾರೆ. ಹಾಗಾಗಿ ಕ್ರಮ ಕೈಗೊಳ್ಳಲೇಬೇಕಿದೆ. ಒಂದು ವೇಳೆ ದಂಡನೆಗೆ ಒಳಗಾದವರು ತಪೆÇ್ಪಪ್ಪಿಗೆ ಪತ್ರ ನೀಡಿದರೆ ಅಮಾನತು ಪತ್ರ ವಾಪಸ್ ಪಡೆಯುತ್ತೇನೆ ಎಂದು ದಿನೇಶ್‍ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ ಎಂದು ಮುನಿಯಪ್ಪ ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಮುಖಂಡರನ್ನು ಒಗ್ಗೂಡಿಸಿಕೊಂಡು ಹೋಗುತ್ತಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಅದು ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಟ್ಟ ವಿಷಯ ಎಂದರು.

ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದೆ.ಈಗ ಪ್ರತಿಪಕ್ಷದ ನಾಯಕನನ್ನಾಗಿ ಮಾಡಿದೆ. ಹಾಗಾಗಿ ಅವರು ಪಕ್ಷದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲಿನ ಆದಾಯ ತೆರಿಗೆ ದಾಳಿ ಸಂಪೂರ್ಣ ದ್ವೇಷದ ರಾಜಕಾರಣ. ಇದು ಹೆಚ್ಚು ದಿನ ನಡೆಯುವುದಿಲ್ಲ. ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಬೆಳೆಯಲು ಬಿಡಬಾರದೆಂದು ದಾಳಿ ನಡೆಸಲಾಗಿದೆ.ಡಿ.ಕೆ.ಶಿವಕುಮಾರ್ ಅವರ ಬಂಧನವಂತೂ ಸಂಪೂರ್ಣ ಅಕ್ರಮ ಎಂದು ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ