ಬೆಂಗಳೂರು, ಅ.19- ಕೊನೆಗೂ ನರಿಯ ಕೂಗು ಗಿರಿ ಮುಟ್ಟಲಿಲ್ಲ ಎಂಬಂತಾಯಿತು ಮಹದಾಯಿ ಹೋರಾಟಗಾರರ ಪರಿಸ್ಥಿತಿ.ಉತ್ತರ ಕರ್ನಾಟಕ ಭಾಗದ ನಾನಾ ಜಿಲ್ಲೆಗಳಿಂದ ಬಂದು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಹಗಲಿರುಳು ಮಳೆ-ಚಳಿಯಲ್ಲಿ ಮಹಿಳೆಯರು, ಮಕ್ಕಳು, ರೈತರು ನೆನೆದು, ನಿದ್ದೆಗೆಟ್ಟು ಮೂರು ದಿನಗಳಿಂದ ಮಾಡಿದ ಹೋರಾಟಕ್ಕೆ ಸರ್ಕಾರ ಕಿವಿಗೊಡಗಲಿಲ್ಲ. ರಾಜ್ಯಪಾಲರು ಕನಿಷ್ಠ ಮನವಿ ಸ್ವೀಕರಿಸಲು ಅವಕಾಶವನ್ನೂ ನೀಡಲಿಲ್ಲ.
ಭೋರ್ಗರೆದು ಸುರಿದ ಮಳೆಯ ನಡುವೆಯೂ ಅಹೋರಾತ್ರಿ ರಾಜಧಾನಿಯಲ್ಲಿ ಹೋರಾಟಗಾರರು ಮಹದಾಯಿಗಾಗಿ ಮೂರು ದಿನಗಳ ಕಾಲ ಹೋರಾಟ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.ಕುಡಿಯುವ ನೀರಿಗಾಗಿ ಕಣ್ಣೀರಿಟ್ಟಿದ್ದರು.ಕಳಸಾ ಬಂಡೂರಿ ಯೋಜನೆ ಅಧಿಸೂಚನೆಗೆ ಒತ್ತಾಯಿಸಿ ರಾಜ್ಯಪಾಲರ ಭೇಟಿಗೆ ಆಗ್ರಹಿಸಿದ್ದರು.ಆದರೆ, ರಾಜ್ಯಪಾಲರು ಭೇಟಿ ನಿರಾಕರಣೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.
ಕಳೆದ ಮೂರು ದಿನಗಳಿಂದ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈತರು ನಡೆಸುತ್ತಿರುವ ಹೋರಾಟದ ಗೋಳು ಕೇಳುವವರೇ ಇಲ್ಲದಂತಾಗಿ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಳೆ, ಚಳಿ ಎನ್ನದೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದು, ಮೂವರು ರೈತ ಮಹಿಳೆಯರು ತೀವ್ರ ಜ್ವರದಿಂದ ಅಸ್ವಸ್ಥರಾಗಿ ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇಷ್ಟೆಲ್ಲ ಆದರೂ ಕಳಸಾ ಬಂಡೂರಿ ಯೋಜನೆ ಅಧಿಸೂಚನೆಗೆ ಮನವಿ ಸಲ್ಲಿಸಲು ರಾಜ್ಯಪಾಲರ ಭೇಟಿ ಮಾಡಲು ರೈತ ಮುಖಂಡರಿಗೆ ಕಡೆಗೂ ಅವಕಾಶ ಸಿಗಲಿಲ್ಲ. ಕೊನೆಗೆ ಪೆÇಲೀಸರು ಆರು ರೈತ ಮಹಿಳೆಯರನ್ನು ಕರೆದೊಯ್ದು ರಾಜಭವನಕ್ಕೆ ಮನವಿ ರವಾನಿಸಿದರು.ಇಷ್ಟು ದಿನ ಮಾಡಿದ ಹೋರಾಟ ವ್ಯರ್ಥವಾದಂತಾಯಿತು ಎಂದು ಹೋರಾಟಗಾರರು ತಮ್ಮ ಅಳಲು ತೋಡಿಕೊಂಡರು.
ಮೂರು ದಿನಗಳಿಂದ ಮಳೆ-ಚಳಿ ಎನ್ನದೆ ಬೀದಿಯಲ್ಲಿ ಕುಳಿತು ಕುಡಿಯುವ ನೀರಿಗಾಗಿ ಹೋರಾಟ ಮಾಡಿದೆವು.ಯಾರು ಕೂಡ ನಮ್ಮನ್ನು ಕ್ಯಾರೆ ಎನ್ನಲಿಲ್ಲ. ನಾವೇನು ಭಯೋತ್ಪಾದಕರಲ್ಲ. ನಾವು ಕೇಳಿದ್ದು ಕುಡಿಯುವ ನೀರು.ರಾಜಭವನಕ್ಕೆ ಹೋಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಸ್ವೀಕೃತಿ ಪ್ರತಿಯನ್ನು ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು.ಅದೂ ಕೂಡ ಈಡೇರಲಿಲ್ಲ ಎಂದು ಪ್ರತಿಭಟನಾಕಾರರು ನೋವು ತೋಡಿಕೊಂಡರು.
ಕರ್ನಾಟಕದ ಐದು ಜಿಲ್ಲೆಗಳ 13 ತಾಲ್ಲೂಕುಗಳಿಂದ ಆಗಮಿಸಿದ ನೂರಾರು ರೈತರು, ಮಹಿಳೆಯರು ಮೂರು ದಿನಗಳಿಂದ ರೈಲ್ವೆ ನಿಲ್ದಾಣದ ಬಳಿಯೇ ಮಹದಾಯಿಗಾಗಿ ಹೋರಾಟ ನಡೆಸಿದ್ದರು. ಇದಕ್ಕಿಂತ ಮುಂಚೆ ಮೂರೂವರೆ ವರ್ಷ ನರಗುಂದದಲ್ಲಿ ಹೋರಾಟ ನಡೆಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊರಬದ ಅವರು, ಸರ್ಕಾರದಿಂದ ರೈತರು ಹುಟ್ಟಿಲ್ಲ. ನಮ್ಮಿಂದ ಸರ್ಕಾರ ಹುಟ್ಟಿದೆ.ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನಾವು ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟದ ಗಂಭೀರತೆಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಇಲ್ಲಿಗೆ ಆಗಮಿಸಿ ಮನವೊಲಿಕೆ ಯತ್ನ ನಡೆಸಿದರು.ನಾವು ರಾಜ್ಯಪಾಲರ ಭೇಟಿಗೆ ಅವಕಾಶ ಕೊಡಿಸಿ ಎಂದು ಕೇಳಿದೆವು.ಆದರೆ, ನಮಗೇ ಮನವಿಯನ್ನು ಕೊಡಿ ಎಂದು ಅವರು ಕೇಳಿದರು.ಅವರ ನಾಟಕ ನಮಗೆ ಅರ್ಥವಾಗುತ್ತದೆ.ಇದು ನಮ್ಮ ಬಳಿ ನಡೆಯುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.