ಉಪಮುಖ್ಯಮಂತ್ರಿ ಕಾರಜೋಳ ಅವರಿಗೆ ರೈತರಿಂದ ತರಾಟೆ

ಬೆಂಗಳೂರು, ಅ.19- ಪ್ರತಿಭಟನಾನಿರತ ರೈತರ ಮನವೊಲಿಕೆಗೆ ಯತ್ನಿಸಿದ ಉಪಮುಖ್ಯಮಂತ್ರಿ ಕಾರಜೋಳ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು.

ರೈಲ್ವೆ ನಿಲ್ದಾಣದಲ್ಲಿ ಕಳೆದ ಮೂರು ದಿನಗಳಿಂದ ಮಹದಾಯಿ ಯೊಜನೆ ಅಧಿಸೂಚನೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿ ತೆರಳಿ ಅವರ ಮನವೊಲಿಕೆಗೆ ಯತ್ನಿಸಿದರು.

ನಿಮ್ಮ ಮನವಿಯನ್ನು ನಮ್ಮ ಬಳಿ ಕೊಡಿ.ನಾವು ರಾಜ್ಯಪಾಲರಿಗೆ ತಲುಪಿಸುತ್ತೇವೆ ಎಂದು ರೈತ ಮುಖಂಡರಿಗೆ ಮನವಿ ಮಾಡಿದರು.ಇದಕ್ಕೆ ಒಪ್ಪದ ಮುಖಂಡರು ನಮ್ಮನ್ನೇ ರಾಜಭವನಕ್ಕೆ ಕರೆದೊಯ್ಯಿರಿ.ನಾವೇ ಮನವಿ ಕೊಡುತ್ತೇವೆ ಎಂದು ಹೇಳಿದರು.

ಆಗ ಕಾರಜೋಳ ಅವರು ರಾಜಭವನದ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಸಂಪರ್ಕ ಸಾಧಿಸಿ ಭೇಟಿ ಮಾಡಲು ಪ್ರಯತ್ನ ಮಾಡಿದರು.ಆದರೆ, ಅವಕಾಶ ಸಿಗಲಿಲ್ಲ. ಪ್ರತಿಭಟನಾನಿರತರೊಂದಿಗೆ ನಡೆಸಿದ ಸಂಧಾನ ವಿಫಲವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾರಜೋಳ ಅವರು ಮಹದಾಯಿ ಸಮಸ್ಯೆ ಬಗೆಹರಿಸಲು ಸರ್ಕಾರ ಸಿದ್ಧವಿದೆ.ಈ ಸಮಸ್ಯೆ ಮೂರೂ ರಾಜ್ಯಗಳಿಗೆ ಸಂಬಂಧಿಸಿದ್ದು.ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಈ ಬಗ್ಗೆ ಏನೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ಚುನಾವಣೆ ನಂತರ ಸಮಸ್ಯೆ ಬಗ್ಗೆ ಸರ್ಕಾರ ಗಮನ ಹರಿಸಲಿದೆ ಎಂದು ಹೇಳಿದರು.

ಹೋರಾಟಗಾರರನ್ನು ರಾಜಭವನಕ್ಕೆ ಕರೆದೊಯ್ದು ಮನವಿ ಕೊಡಿಸಲು ಸಾಧ್ಯವಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಿಲ್ಲ ಎಂದು ಅಲ್ಲಿಂದ ತೆರಳಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ