ಬೆಂಗಳೂರು, ಅ.19- ನಗರದ ಹೃದಯ ಭಾಗದಲ್ಲಿರುವ ಶಿವಾನಂದ ವೃತ್ತದ ಬಳಿ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಎರಡು ವರ್ಷ ಕಳೆದರೂ ಪೂರ್ಣಗೊಳ್ಳದೆ ಸಾರ್ವಜನಿಕರಿಗೆ ನರಕ ದರ್ಶನ ಮಾಡಿಸುತ್ತಿದೆ.
ರೇಸ್ಕೋರ್ಸ್ನಿಂದ ಶೇಷಾದ್ರಿಪುರಂ ಮಾರ್ಗವಾಗಿ ಸುಲಲಿತವಾಗಿ ಚಲಿಸಲು ಶಿವಾನಂದ ವೃತ್ತದ ಬಳಿ ಸ್ಟೀಲ್ಬ್ರಿಡ್ಜ್ ಕಾಮಗಾರಿ ನಡೆಸಲು 2017ರ ಜೂನ್ನಲ್ಲೇ ಕಾರ್ಯಾದೇಶ ನೀಡಲಾಗಿದೆ.
ಆರಂಭದಲ್ಲಿ ಬಿಬಿಎಂಪಿ 19.85 ಕೋಟಿ ರೂ.ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮತ್ತು 32 ಕೋಟಿ ರೂ.ಭೂ ಸ್ವಾಧೀನ ವೆಚ್ಚ ಸೇರಿ ಒಟ್ಟು 50 ಕೋಟಿಯಷ್ಟು ಗಾತ್ರದ ಯೋಜನೆಯನ್ನು ರೂಪಿಸಿತ್ತು.
ಆದರೆ, ಸ್ಥಳೀಯರು ಬ್ರಿಡ್ಜ್ನ ಏರಿಳಿತ ತುಂಬಾ ಕಡಿದಾಗಿದ್ದು, ವಾಹನಗಳು ಹತ್ತುವಾಗ ಹೆಚ್ಚು ಶಬ್ಧ ಮತ್ತು ಹೊಗೆ ಬರುತ್ತದೆ ಜತೆಗೆ ಮರಗಳು ನಾಶವಾಗುತ್ತವೆ ಎಂದು ಆಕ್ಷೇಪಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಸುಮಾರು ಆರು ತಿಂಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಹೈಕೋರ್ಟ್ನಂತರ ಸುಪ್ರೀಂಕೋರ್ಟ್ ವರೆಗೂ ಪ್ರಕರಣ ಹೋಗಿತ್ತು. ಅಂತಿಮವಾಗಿ ನ್ಯಾಯಾಲಯದ ತೀರ್ಪು ಆಧರಿಸಿ ಬಿಬಿಎಂಪಿ ಅಧಿಕಾರಿಗಳು ಸೇತುವೆಯ ಏರಿಳಿತವನ್ನು ತಗ್ಗಿಸಿದ್ದರು.
ಇದರಿಂದಾಗಿ ಆರಂಭದಲ್ಲಿ 10 ಪಿಲ್ಲರ್ಗಳ ಮೇಲೆ ನಿರ್ಮಾಣವಾಗಬೇಕಿದ್ದ ಉಕ್ಕಿನ ಸೇತುವೆ 16 ಪಿಲ್ಲರ್ಗಳಿಗೆ ಏರಿಕೆಯಾಯಿತು.ಯೋಜನಾ ಗಾತ್ರ ಕೂಡ 10 ಕೋಟಿಗೆ ಹೆಚ್ಚಳವಾಯಿತು.
ಮೊದಲು 176 ಮೀಟರ್ಗಳಷ್ಟು ಉದ್ದ ಇದ್ದ ಸೇತುವೆ ಈಗ 493 ಮೀಟರ್ಗಳಷ್ಟು ಹೆಚ್ಚಳವಾಗಿದೆ.10 ಪಿಲ್ಲರ್ಗಳನ್ನು ಹೆಚ್ಚುವರಿಯಾಗಿ ಆಳವಡಿಸಬೇಕಾದ್ದರಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
2017ರ ಜೂನ್ನಿಂದ 13 ತಿಂಗಳ ಒಳಗಾಗಿ ಮುಗಿಯಬೇಕಿದ್ದ ಕಾಮಗಾರಿ 28 ತಿಂಗಳಾದರೂ ಪೂರ್ಣಗೊಂಡಿಲ್ಲ. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಶಿವಾನಂದ ಸರ್ಕಲ್ನ ಕಾಮಗಾರಿಯ ಸ್ಥಿತಿಯೇ ಈ ದುರ್ಗತಿಯಾದರೆ, ಇನ್ನು ದೂರದಲ್ಲಿರುವ ಕಾಮಗಾರಿಗಳ ಪರಿಸ್ಥಿತಿಯನ್ನು ಹೇಳುವವರು ಇಲ್ಲ, ಕೇಳುವವರಿಲ್ಲ ಎಂಬಂತಾಗಿದೆ.
ದಿನನಿತ್ಯ ಈ ರಸ್ತೆಯಲ್ಲಿ ಹಲವಾರು ಸಚಿವರು, ಶಾಸಕರು ಸಂಚರಿಸುತ್ತಾರೆ.ಎಲ್ಲರೂ ಕಂಡೂ ಕಾಣದಂತೆ ಹೋಗುತ್ತಿರುತ್ತಾರೆಯೇ ಹೊರತು ಕುಂಟುತ್ತಾ ಸಾಗುತ್ತಿರುವ ಕಾಮಗಾರಿಯ ಬಗ್ಗೆ ಯಾರೂ ಗಂಭೀರವಾಗಿ ಗಮನ ಹರಿಸಿದಂತೆ ಇಲ್ಲ.
ಈ ರಸ್ತೆಯಲ್ಲಿ ಪೀಕ್ ಅವರ್ನಲ್ಲಿ ಸರಿಸುಮಾರು 1800 ವಾಹನಗಳು ಪ್ರತಿ ಗಂಟೆಗೆ ಸಂಚರಿಸುತ್ತವೆ. 2033ರ ವೇಳೆಗೆ ಈ ರಸ್ತೆಯ ವಾಹನ ದಟ್ಟಣೆ ಸುಮಾರು 5690ರಷ್ಟಾಗಬಹುದೆಂಬ ಅಂದಾಜಿದೆ.
ಭವಿಷ್ಯದ ದೃಷ್ಟಿಯಿಂದ ನೋಡಿದರೆ ಈಗ ನಿರ್ಮಾಣವಾಗುತ್ತಿರುವ ಸೇತುವೆ ಇನ್ನು ಐದಾರು ವರ್ಷಗಳಲ್ಲಿ ಸಂಚಾರ ದಟ್ಟಣೆಯನ್ನು ನಿಭಾಯಿಸಲು ಆಗದೆ ಮರು ನಿರ್ಮಾಣವಾಗೊಳ್ಳುವಂತಹ ಪರಿಸ್ಥಿತಿ ಎದುರಾಗಬಹುದೆಂಬ ಆತಂಕವಿದೆ.
ಬಿಬಿಎಂಪಿ ಗಂಭೀರ ಸ್ವರೂಪದ ಯಾವುದೇ ತಾಂತ್ರಿಕ ತೊಡಕುಗಳು ಇಲ್ಲದಿದ್ದರೂ ಕಾಮಗಾರಿ ನಿರ್ವಹಣೆಯನ್ನು ವಿಳಂಬ ಮಾಡುತ್ತಿದೆ.ಗುತ್ತಿಗೆದಾರರ ಮೇಲೆ ಒತ್ತಡ ತಂದು ಶೀಘ್ರವೇ ಕೆಲಸ ಮುಗಿಸಬೇಕೆಂಬ ಇಚ್ಚಾಶಕ್ತಿ ಯಾರಿಗೂ ಇದ್ದಂತಿಲ್ಲ. ಇದರಿಂದಾಗಿ ಶಿವಾನಂದ ಸರ್ಕಲ್ನಲ್ಲಿ ಪ್ರತಿ ನಿತ್ಯ ಸಂಚರಿಸುವ ಸಾವಿರಾರು ನಾಗರಿಕರು ನರಕ ದರ್ಶನ ಪಡೆಯುತ್ತಿದ್ದಾರೆ.
ಸಿಗ್ನಲ್ನಲ್ಲೇ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ.ಈ ಮಾರ್ಗಗಳಿಗೆ ಪರ್ಯಾಯ ಮಾರ್ಗಗಳು ಕಡಿಮೆ ಇರುವುದರಿಂದ ಎತ್ತಲೂ ತಿರುಗಲಾಗದೆ ನಿಂತ ಜಾಗದಲ್ಲೇ ಸರ್ಕಾರ ಹಾಗೂ ಬಿಬಿಎಂಪಿಗೆ ವಾಹನ ಸವಾರರು ಶಾಪ ಹಾಕುವುದು ಸಾಮಾನ್ಯವಾಗಿದೆ.