ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ

Varta Mitra News

ಬೆಂಗಳೂರು,ಅ.19- ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ ನೀಡಲು ಬಿಜೆಪಿ ಸರ್ಕಾರ ಮುಂದಾಗಿದ್ದು, ನೌಕರರಿಗೆ ತುಟ್ಟಿಭತ್ಯೆ(ಡಿಎ) ಹೆಚ್ಚಳ ಮಾಡಿ ಅಧಿಕೃತ ಆದೇಶವನ್ನು ಇಂದು ಸಂಜೆಯೊಳಗೆ  ಹೊರಡಿಸುವ ಸಾಧ್ಯತೆ ಇದೆ.

ಸರ್ಕಾರಿ ನೌಕರರ ತುಟ್ಟಿ ಭತ್ಯೆ(ಡಿಎ)ಹೆಚ್ಚಳಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ ನೀಡಿದ್ದು, ಅಧಿಕೃತ ಆದೇಶ ಹೊರಬೀಳುವುದಷ್ಟೇ ಬಾಕಿಯಿದೆ.

ಸರ್ಕಾರಿ ನೌಕರರಿಗೆ ಶೇ.4.75 ತುಟ್ಟಿಭತ್ಯೆ ನೀಡಲು ತೀರ್ಮಾನಿಸಲಾಗಿದೆ.ಅಖಿಲ ಭಾರತ ಬೆಲೆ ಸೂಚ್ಯಂಕ ಆಧರಿಸಿ ಕೇಂದ್ರ ಸರ್ಕಾರ ನೌಕರರಿಗೆ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರವು ಶೇ.5 ತುಟ್ಟಿಭತ್ಯೆ ಮಂಜೂರು ಮಾಡಿ ಆದೇಶ ಹೊರಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ತಂಡ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತುಟ್ಟಿಭತ್ಯೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿದ್ದ ಮನವಿ ಪತ್ರ ಸಲ್ಲಿಸಿದ್ದರು.

ಮನವಿಯಲ್ಲಿ ಶೇ.4.75ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಬಹುದೆಂಬ ಬೇಡಿಕೆಯಿದೆ.ಸದ್ಯ ಸರ್ಕಾರಿ ನೌಕರರು ಶೇ.6.5 ತುಟ್ಟಿ ಭತ್ಯೆ ಪಡೆಯುತ್ತಿದ್ದು, ಅದು ಇನ್ನು ಮುಂದೆ ಶೇ.11.25ಗೆ ಏರಿಕೆ ಆಗಲಿದೆ.

ರಾಜ್ಯ ಸರ್ಕಾರಿ ನೌಕರರು, ಜಿಲ್ಲಾ ಪಂಚಾಯತ್‍ಗಳ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಗಳಲ್ಲಿ ಪೂರ್ಣಾವಧಿ ವರ್ಕ್ ಚಾರ್ಜ್ ನೌಕರರು, ಸರ್ಕಾರದ ಸಹಾಯಾನುದಾನ ಪಡೆಯುವ ಶಿಕ್ಷಣಸಂಸ್ಥೆಗಳ, ವಿಶ್ವವಿದ್ಯಾಲಯಗಳ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೂ ತುಟ್ಟಿಭತ್ಯೆ ಹೆಚ್ಚಳದ ಲಾಭ ದೊರೆಯಲಿದೆ.

ಅದರಂತೆ 17,000 ರೂ.ಮೂಲ ವೇತನ ಪಡೆಯುವ ಸರ್ಕಾರಿ ನೌಕರರಿಗೆ 1,913 ರೂ.ತುಟ್ಟಿ ಭತ್ಯೆ ಏರಿಕೆಯಾಗಲಿದೆ. ಇನ್ನು 67,550  ರೂ. ಮೂಲ ವೇತನ ಪಡೆಯುವ ನೌಕರರ ತುಟ್ಟಿಭತ್ಯೆಯಲ್ಲಿ 7,599 ರೂ ಹೆಚ್ಚಳವಾಗಲಿದೆ.

ದೀಪಾವಳಿ ಹಬ್ಬದ ಕೊಡುಗೆಯಾಗಿ ಈ ಹಿಂದಿನ ತುಟ್ಟಿ ಭತ್ಯೆಯಲ್ಲಿ ಬಾಕಿ ಉಳಿದಿರುವ ಭಿನ್ನಾಂಶವನ್ನು ಸೇರಿಸಿ ಜುಲೈ 1, 2019ಕ್ಕೆ ಪೂರ್ವಾನ್ವಯವಾಗುವಂತೆ ಶೇ.5ರಷ್ಟು ತುಟ್ಟಿ ಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ಬಿಡುಗಡೆಗೊಳಿಸುವಂತೆ ಕೋರಿ ಅ.15ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ  ಮುಖ್ಯಮಂತ್ರಿಗೆ ಮನವಿ ಮಾಡಿತ್ತು.

ಅದಕ್ಕೆ  ಒಪ್ಪಿದ್ದ  ಯಡಿಯೂರಪ್ಪನವರು ಈ ಸಂಬಂಧ ಪ್ರಸ್ತಾಪ ಸಲ್ಲಿಸುವಂತೆ ಅರ್ಥಿಕ ಇಲಾಖೆಗೆ ಸೂಚನೆ ನೀಡಿದ್ದರು. ಇದೀಗ ಸರ್ಕಾರ ದೀಪಾವಳಿ ಕೊಡುಗೆಯಾಗಿ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4.75ಗೆ ಹೆಚ್ಚಿಸಲು ಮುಂದಾಗಿದೆ.

ನಿವೃತ್ತಿ ವೇತನದಾರರಿಗೂ ಈ ಹೆಚ್ಚಳ ಅನ್ವಯ:

ಸರ್ಕಾರಿ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು, ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುವವರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಈ ಹೆಚ್ಚಳ ಅನ್ವಯವಾಗಲಿದೆ.

ಸರ್ಕಾರಿ ನೌಕರರಿಗೆ ಶೇ.4.75 ತುಟ್ಟಿಭತ್ಯೆ ನೀಡಲು ತೀರ್ಮಾನಿಸಲಾಗಿದೆ.ಶೇ.4.75 ತುಟ್ಟಿಭತ್ಯೆ ಹೆಚ್ಚಳವಾಗುತ್ತಿದ್ದಂತೆ ಯಾರು ಯಾರಿಗೆ ಎಷ್ಟು ಎಷ್ಟು ವೇತನ ಏರಿಕೆಯಾಗಲಿದೆ?ಎಂಬ ವಿವರ ಈ ಕೋಷ್ಟಕದಲ್ಲಿ ಲಭ್ಯವಾಗಲಿದೆ. ತುಟ್ಟಿಭತ್ಯೆ ಹೆಚ್ಚಳದ ನಂತರ ಪ್ರತಿ ನೌಕರರಿಗೆ ಸರಾಸರಿ 1200 ರೂ.ನಿಂದ 4 ಸಾವಿರ ರೂ. ವರೆಗೆ ಮಾಸಿಕ ವೇತನ ಹೆಚ್ಚಳವಾಗಲಿದೆ.

ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕ ಮಾಡಲಾಗುತ್ತದೆ.ನಂತರ ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ.

 

 

 

 

ಶನೈಶ್ಚರನ ದೇಗುಲವನ್ನು ಏಕಾಏಕಿ ತೆರವುಗೊಳಿಸಿz ರೇಲ್ವೇ ಇಲಾಖೆ

ಬೆಂಗಳೂರು,ಅ.19- ಓಕುಳಿಪುರ ಜಂಕ್ಷನ್ ಬಳಿಯಿರುವ ಶನಿದೇವರ ದೇವಸ್ಥಾನದಲ್ಲಿ ಶನಿವಾರದಂದು ಸದಾ ಜನಜಂಗುಳಿ. ಕಳೆದು ನಾಲ್ಕು ದಶಕಗಳಿಂದಲೂ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಬಂದು ಹೋಗುತ್ತಿದ್ದರು.ರೈಲ್ವೇ ಸ್ಟೇಷನ್ ಬಳಿಯಿರುವ ಶನೈಶ್ಚರನ ದೇಗುಲವನ್ನು ರೇಲ್ವೇ ಇಲಾಖೆಯವರು ಏಕಾಏಕಿ ತೆರವುಗೊಳಿಸಿದ್ದಾರೆ.

ಹೈಕೋರ್ಟ್ ಆದೇಶದಂತೆ ಇಲಾಖೆ ಸಿಬ್ಬಂದಿ ದೇವಸ್ಥಾನವನ್ನು ಸ್ಥಳಾಂತರ ಮಾಡಿದ್ದಾರೆ. ಆದರೆ ಈ ಬಗ್ಗೆ ಮಾಹಿತಿ ಇರದೆ ಬಂದ ಭಕ್ತರು ದೇಗುಲ ಮತ್ತು ದೇವರ ಮೂರ್ತಿ ಇರದಿದ್ದುದನ್ನು ಕಂಡು ರೈಲ್ವೇ ಇಲಾಖೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಶನೈಶ್ಚರ ಮೂರ್ತಿಯನ್ನು ಶ್ರೀರಾಮಪುರದ ಅಯ್ಯಪ್ಪ ದೇಗುಲದಲ್ಲಿ ಇಟ್ಟಿದ್ದೇವೆ. ಆದರೆ ದೇವರ ಪಾದವನ್ನು ಮಾತ್ರ ಇಲ್ಲಿಯೇ ಬಿಟ್ಟಿದ್ದೇವೆ ಎಂದಿದ್ದಾರೆ.

ಇದಕ್ಕೆ ಭಕ್ತರು ರೈಲ್ವೇ ಇಲಾಖೆ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.ನಾಲ್ಕು ದಶಕಗಳಿಂದ ಶನೈಶ್ಚರ ದೇಗುಲವಿದೆ.ಆದರೆ ಅದನ್ನು ಪದೇ ಪದೇ ರೈಲ್ವೇ ಇಲಾಖೆಯವರು ಸ್ಥಳಾಂತರ ಮಾಡುತ್ತಿದ್ದಾರೆ.ಹೀಗೆ ಮಾಡಿದರೆ ಹೇಗೆ.ಇಲ್ಲಿಗೆ ಬಂದು ದೇವರ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇತ್ತು.ಇಷ್ಟು ಜಾಗ ಖಾಲಿ ಇದೆ.ಇದರಲ್ಲಿ ದೇವಸ್ಥಾನಕ್ಕೆ ಒಂದಿಷ್ಟು ಜಾಗ ಬಿಟ್ಟಿದ್ದರೆ ಏನಾಗುತ್ತಿತ್ತು ಎಂದು ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ.

ಇದವರೆಗೂ ಮೂರು ಬಾರಿ ಈ ದೇವಸ್ಥಾನವನ್ನು ಸ್ಥಳಾಂತರ ಮಾಡಲಾಗಿದೆ.ಈ ಹಿಂದೆ ಶ್ರೀರಾಮಪುರದಿಂದ ಓಕಳಿಪುರಂಗೆ ಸ್ಥಳಾಂತರಿಸಲಾಗಿತ್ತು.ಬಳಿಕ ರಸ್ತೆ ಅಗಲೀಕರಣಕದ ಉದ್ದೇಶದಿಂದ ರೈಲ್ವೇ ಇಲಾಖೆಯು ಆರು ತಿಂಗಳ ಹಿಂದಷ್ಟೇ ಮೆಜೆಸ್ಟಿಕ್ ಸಮೀಪದ ಸ್ಥಳಕ್ಕೆ ಶಿಫ್ಟ್ ಮಾಡಿತ್ತು.ಇದೀಗ ಅಲ್ಲಿಂದಲೂ ಶನೇಶ್ವರನನ್ನು ಓಕಳೀಪುರಂನಲ್ಲಿರುವ ಅಯ್ಯಪ್ಪ ದೇಗುಲಕ್ಕೆ ಸ್ಥಳಾಂತರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ