ವಲಸಿಗರಂತೆ ರಾಜ್ಯ ಪ್ರವೇಶಿಸಿರುವ ಜೆಎಂಬಿ: ಉಗ್ರರ ಸ್ಲೀಪರ್ ಸೆಲ್ ಆಗುತ್ತಿದೆ ಬೆಂಗಳೂರು, ಮೈಸೂರು!

ಮೈಸೂರು: ಬಾಂಗ್ಲಾದೇಶದ ಅಕ್ರಮ ವಲಸಿಗರ ಸೋಗಿನಲ್ಲಿ ಬಾಂಗ್ಲಾದೇಶದ ಮುಜಾಹಿದ್ದೀನ್ ಸಂಘಟನೆಯ ಭಯೋತ್ಪಾದಕರು ರಾಜ್ಯ ಪ್ರವೇಶಿಸಿದ್ದು, ಮೈಸೂರು, ಕರಾವಳಿ ಪ್ರದೇಶ ಹಾಗೂ ಬೆಂಗಳೂರು ನಗರದಲ್ಲಿ ಸಕ್ರಿಯರಾಗಿದ್ದಾರೆಂದು ತಿಳಿದುಬಂದಿದೆ.

ರಾಷ್ಟ್ರೀಯ ತನಿಖಾ ದಳ (ಎನ್ಐಎ) ಈ ಮಾಹಿತಿಯನ್ನು ನೀಡಿದ್ದು, ಬೆಂಗಳೂರು, ಮೈಸೂರು, ಕರಾವಳಿ ಪ್ರದೇಶ ಸೇರಿದಂತೆ ರಾಜ್ಯಾದಾದ್ಯಂತ ಕಟ್ಟುನಿಟ್ಟಿನ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ,

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು, ಬಾಂಗ್ಲಾದೇಶದ ಮುಜಾಹಿದ್ದೀನ್ ಸಂಘಟನೆಯ ಉಗ್ರರು ಜಮ್ಮು ಮತ್ತು ಕಾಶ್ಮೀರ ಮತ್ತು ಕರ್ನಾಟಕ ರಾಜ್ಯಕ್ಕೆ ನುಸುಳಿದ್ದಾರೆ ಎಂದು ಎನ್ಐಎಯಿಂದ ಮಾಹಿತಿ ಬಂದಿದೆ. ಹೀಗಾಗಿ ರಾಜ್ಯದ ಎಲ್ಲೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಕರಾವಳಿ ಪ್ರದೇಶ, ಬೆಂಗಳೂರು ನಗರದಂತಹ ಸ್ಲೀಪರ್ ಸೆಲ್ ಗಳಲ್ಲಿ ಇಂತಹ ಉಗ್ರರು ಇರುವ ಸಾಧ್ಯತೆಗಳಿವೆ. ಅದರಲ್ಲೂ ಕರಾವಳಿ ಪ್ರದೇಶದಲ್ಲಿಯೇ ಈ ಉಗ್ರರು ಹೆಚ್ಚು ಸಕ್ರಿಯವಾಗಿರುವ ಕುರಿತು ಎನ್ಐಎ ಮಾಹಿತಿ ನೀಡಿದೆ. ಹೀಗಾಗಿ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾಯಿರಿಸಲಾಗಿದ್ದು, ಯಾವುದೇ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದಿದ್ದಾರೆ.

ಬೆಂಗಳೂರಿನ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಉಗ್ರರ ಅಡುಗುತಾಣಗಳು ಪತ್ತೆಯಾಗಿವೆ ಎನ್ನುವ ಸುದ್ದಿಗಳ ಕುರಿತು ಪ್ರತಿಕ್ರಿಯೆ ನೀಡಲು ಸಚಿವರು ಇದೇ ವೇಳೆ ನಿರಾಕರಿಸಿದ್ದಾರೆ.

ಕೆಲ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ. ಉಗ್ರರನ್ನು ಯಾವ ರೀತಿ ನಿಯಂತ್ರಿಸಬೇಕೆನ್ೇನು ಬಗ್ಗೆ ಗೌಪ್ಯವಾಗಿ ಕೆಲಸ ಮಾಡಲಾಗುತ್ತಿದೆ. ಪೊಲೀಸರು ಸಂಗ್ರಹಿಸಿರುವ ಮಾಹಿತಿ ಸರಿಯಾಗಿದ್ದರೆ ಯಾರಿಂದಲೂ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಪೊಲೀಸರು ಕಳ್ಳರು, ಭಯೋತ್ಪಾದಕರಿಗೆ ಕಠಿಣವಾಗಿರಬೇಕು. ಜನಸಾಮಾನ್ಯರಿಗೆ ಆತ್ಮೀಯರಾಗಿರಬೇಕು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ