ದರೋಡೆಕೋರರಿಂದ ಚಿನ್ನಾಭರಣ ಲೋಟಿ

ಬೆಂಗಳೂರು,ಅ.18: ಕೇಬಲ್ ರಿಪೇರಿ ನೆಪದಲ್ಲಿ ಅಪಾರ್ಟ್‍ಮೆಂಟ್‍ನ ಮನೆಯೊಂದಕ್ಕೆ ನುಗ್ಗಿದ ಮೂವರು ದರೋಡೆಕೋರರು ಮಾಲೀಕನ ಕೈಕಾಲು ಕಟ್ಟಿ, ಬಾಯಿ ಮುಚ್ಚಿ ಹಣ, ಆಭರಣ,ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಕೈಗಡಿಯಾರಗಳನ್ನು ದೋಚಿ ಪರಾರಿಯಾಗಿರುವ ಘಟನೆ ವಿವಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀನಗರದ ಆವಲಹಳ್ಳಿ ಮುಖ್ಯರಸ್ತೆಯಲ್ಲಿರುವ ಸಾಗರ್ ಫ್ರೈಡ್ ಅಪಾರ್ಟ್‍ಮೆಂಟ್‍ನ 2ನೇ ಮಹಡಿಯ 105ನೇ ಫ್ಲಾಟ್‍ನಲ್ಲಿ ಉತ್ತಮ್ ಚಂದ್ ಜೈನ್ ಎಂಬುವರ ಕುಟುಂಬ ವಾಸವಾಗಿದೆ.
ನಿನ್ನೆ ಮಧ್ಯಾಹ್ನ 2.30 ಸುಮಾರಿನಲ್ಲಿ ಉತ್ತಮ್ ಚಂದ್ ಜೈನ್ ಅವರು ಒಬ್ಬರೇ ಇದ್ದರು. ಈ ಸಂದರ್ಭದಲ್ಲಿ ಮೂವರು ದರೋಡೆಕೋರರು ಇವರ ಮನೆ ಬಳಿ ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ.
ಮನೆಯೊಳಗಿದ್ದ ಉತ್ತಮ್‍ಚಂದ್ ಅವರು ಯಾರೆಂದು ಕೇಳಿದಾಗ, ನಾವು ಕೇಬಲ್ ರಿಪೇರಿಯವರೆಂದು ಹೇಳಿ ಬಾಗಿಲು ತೆಗೆಸಿದ ದರೋಡೆಕೋರರು ಒಳನುಗ್ಗಿ ಹಗ್ಗದಿಂದ ಉತ್ತಮ್ ಅವರ ಕೈಕಾಲು ಕಟ್ಟಿ ಕಿರುಚಾಡದಂತೆ ಬೆದರಿಸಿದ್ದಾರೆ.
ನಂತರ ಬೀರುವಿನಲ್ಲಿದ್ದ 7 ಲಕ್ಷ ಹಣ, ಸುಮಾರು 8 ಲಕ್ಷ ಮೌಲ್ಯದ ಚಿನ್ನಾಭರಣ, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಕೈಗಡಿಯಾರಗಳನ್ನೆಲ್ಲ ಬ್ಯಾಗ್‍ಗೆ ತುಂಬಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ವಿಷಯ ತಿಳಿದ ವಿವಿಪುರಂ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ